ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾಳೆ ಭೂಮಿ ಪೂಜೆ ನೆರವೇರಲಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಮುಖವಾಗಿ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ರಾಮಜನ್ಮಭೂಮಿ- ಬಾಬರಿ ಮಸೀದಿಯ ವಿವಾದಿತ ಸ್ಥಳವಾಗಿದ್ದ ಅಯೋಧ್ಯೆ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ರಾತ್ರಿ 8 ಗಂಟೆಯಿಂದ ಆ. 6ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ರಾಮಮಂದಿರ ಶಿಲಾನ್ಯಾಸ ನೆರವೇರಲಿರುವುದರಿಂದ ಮಂಗಳೂರಿನಲ್ಲಿ ನಾಳೆ ಹಿಂದೂಪರ ಸಂಘಟನೆಗಳು, ಸಾರ್ವಜನಿಕರು ವಿಶೇಷ ಪೂಜೆ, ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಅಹಿತಕರ ಘಟನೆ ನಡೆಯುವ ಸಾಧ್ಯತೆಯೂ ಇರುವುದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇಂದು ರಾತ್ರಿ 8 ಗಂಟೆಯ ಬಳಿಕ ಆ. 6ರ ಬೆಳಗಿನವರೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಕತ್ತಿ, ಶಸ್ತ್ರಾಸ್ತ್ರಗಳು, ಚಾಕು, ಕಲ್ಲು ಮುಂತಾದವನ್ನು ಹಿಡಿದು ಸಂಚರಿಸುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ. ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆಯನ್ನು ನಡೆಸುವಂತಿಲ್ಲ. ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ. ಈ ಎಲ್ಲ ನಿರ್ಬಂಧಗಳು ಸರ್ಕಾರದ ಅನುಮತಿ ಪಡೆದು ನಡೆಯುವ ಕಾರ್ಯಕ್ರಮ, ಸಮಾರಂಭಗಳಿಗೆ ಅನ್ವಯವಾಗುವುದಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ