Kannada NewsLatestNationalUncategorized

*ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭ*

ಪ್ರಗತಿವಾಹಿನಿ ಸುದ್ದಿ: ಕೋಟ್ಯಂತರ ಭಾರತೀಯರ ನೂರಾರು ವರ್ಷಗಳ ಕನಸು ನನಸಾಗುವ ಕ್ಷಣ ಬಂದೇಬಿಟ್ಟಿದೆ. ಇನ್ನೇನು ಕೆಲ ಸಮಯಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಕೋಟಿ ಕೋಟಿ ರಾಮ ಭಕ್ತರು ಕಾತರರಾಗಿದ್ದಾರೆ. ಇಡೀ ದೇಶದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ರಾಮನೂರು ಅಯೋಧ್ಯೆಯಲ್ಲಿ ಎಲ್ಲೆಲ್ಲೆ ರಾಮನಾಮ ಕೇಳಿಬರುತ್ತಿದೆ. ಈಗಾಗಲೇ ರಾಜಕೀಯ ನಾಯಕರು, ಸಿನಿ ತಾರೆಯರು ಗಣ್ಯಾತಿಗಣ್ಯರು, ಮಠಾಧೀಶರು ರಾಮ ಜನ್ಮ ಭೂಮಿ ಅಯೊದ್ಯೆ ತಲುಪಿದ್ದಾರೆ. ಕೆಲ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಲಿದ್ದಾರೆ.

ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯುವುದು ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಭಿಜಿತ್ ಮುಹೂರ್ತದಲ್ಲಿ ಮಧ್ಯಾಹ್ನ 12:29ರಿಂದ 12:30ರಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

ಬೆಳಿಗ್ಗೆ 10ಗಂಟೆಯಿಂದ ಬರೋಬ್ಬರಿ 50 ತಂಡಗಳಿಂದ ಮಂಗಳ ವಾದ್ಯ ಮೇಳೈಸಲಿವೆ. ಗಣ್ಯರಿಂದ ಆರತಿ ಬೆಳಗಲಿದೆ. ಕಾಶಿಯ ಹೆಸರಾಂತ ವೈದಿಕ ಆಚಾರ್ಯ ಗಣೇಶ್ವರ್ ದ್ರಾವಿಡ್ ಹಾಗೂ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿದ್ದು, 121 ವೈದಿಕ ಆಚಾರ್ಯರಿಂದ ಧಾರ್ಮಿಕ ಕ್ರಿಯೆ, 150ಕ್ಕೂ ಹೆಚ್ಚು ಸಂಪ್ರದಾಯಗಳು ನಡೆಯಲಿವೆ.

ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಳಿಕ ದೀಪ ಬೆಳಗುವ ಮೂಲಕ ದೀಪಾವಳಿ ಆಚರಿಸಲಾಗುತ್ತದೆ. ಸಂಜೆ ಅಯೋಧ್ಯೆಯಲ್ಲಿ 10 ಲಕ್ಷ ದೀಪ ಬೆಳಗಲಿದೆ. ಅಯೋದ್ಯೆ ಮನೆಮನೆಗಳಲ್ಲಿ, ಅಂಗಡಿಗಳಲ್ಲಿ ಐತಿಹಾಸಿಕ ಸ್ಥಳಗಳಲ್ಲಿ ರಾಮಜ್ಯೋತಿ ಬೆಳಗಲಿದೆ. ಸಂಜೆ ಸರಯೂ ನದಿ ತಟದ ರಾಮ್ ಕಿ ಪಾಡಿಯಲ್ಲಿ ದೀಪ ಬೆಳಗಲಾಗುತ್ತದೆ.

ಕನಕ ಭವನ್, ಹನುಮಾನ್ ಗಡಿ, ಗುಪ್ತರ ಘಾಟ್, ಸರಯೂ ಘಾಟ್, ಲತಾ ಮಂಗೇಶ್ಕರ್ ಚೌಕ್, ಮಣಿರಾಮ್ ದಾಸ್ ಕಂಟೋನ್ಮೆಂಟ್ ಸೇರಿದಂತೆ 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ದೀಪ ಬೆಳಗಲಾಗುತ್ತದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button