Latest

ಈ ಕಾಯಿದೆಯಿಂದ ಯಾರು ಬೇಕಾದರೂ ರೈತರಾಗಬಹುದು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈತರು ಅನಗತ್ಯ ಪ್ರತಿಭಟನೆ ಮಾಡುವುದುದನ್ನು ನಿಲ್ಲಿಸಬೇಕು. ಭೂ ಸುಧಾರಣೆ ಕಾಯಿದೆಯಿಂದ ಯಾರು ಬೇಕಾದರೂ ರೈತರಾಗುವ ಅವಕಾಶ ನೀಡಲಾಗಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರು ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳ ತೊಂದರೆಯಿಲ್ಲದೇ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿರುವ ಕೃಷಿ ಮಸೂದೆ ಐತಿಹಾಸಿಕ ಹಾಗೂ ಸ್ವಾಗತಾರ್ಹ. ರೈತರ ಪರವಾದ ಕಾಯಿದೆ ಜಾರಿಯಿಂದಾಗಿ ರೈತರಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದರು.

ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆ, ವಿದ್ಯುತ್ ಕಾಯಿದೆ ತಿದ್ದುಪಡಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ದುರುದ್ದೇಶ ಪೂರಕವಾಗಿದೆ. ಇದು ರೈತರ ಪ್ರತಿಭಟನೆಯಲ್ಲ. ರೈತ ಹೋರಾಟಗಾರರ ಪ್ರತಿಭಟನೆ ಎಂದು ಕಿಡಿಕಾರಿದರು.

ಭೂ ಸುಧಾರಣಾ ಕಾಯಿದೆಯಿಂದ ಎಲ್ಲರೂ ರೈತರಾಗುವ ಅವಕಾಶ ನೀಡಲಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ರೈತರ ಮನೆ ಬಾಗಿಲಿಗೆ ಹೋಗಿ ಉತ್ಪನ್ನಗಳನ್ನು ಖರೀದಿಸಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂದಮಾತ್ರಕ್ಕೆ ಎಪಿಎಂಸಿಯಲ್ಲಿ ಮಾರಾಟ ನಿಲ್ಲಿಸಿಲ್ಲ. ಅಲ್ಲಿಯೂ ರೈತರು ಉತ್ಪನ್ನ ಮಾರಬಹುದು ದಲ್ಲಳಿಗಳ, ಮಧ್ಯವರ್ತಿಗಳ ತೊಂದರೆ ತಪ್ಪಿಸಲು ಇದು ಸಹಕಾರಿಯಾಗಿದೆ. ರೈತಪರ ಕಾಯ್ದೆ ಜಾರಿ ಮಾಡಿರುವ ಸರ್ಕಾರದ ಉದ್ದೇಶ ಸೂಕ್ತವಾಗಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ನಾನು 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇವೆ. ಎಲ್ಲಾ ಎಪಿಎಂಸಿಗೆ ಭೇಟಿ ಕೊಟ್ಟಿದ್ದೇವೆ. ಯಾವ ರೈತರು, ಎಪಿಎಂಸಿಗಳು ಕಾಯಿದೆ ವಿರೋಧಿಸಿಲ್ಲ. ರೈತನ ಬೆಳೆ ಮಾರಾಟ ಆತನ ಹಕ್ಕು. ಕಾಯಿದೆಯಿಂದ ಮೊದಲಿದ್ದ ಮಾರಾಟದ ನಿಯಮವನ್ನು ಕೇಂದ್ರ ಸಡಿಲಿಸಿದೆ. ಎಪಿಎಂಸಿ ಸೆಸ್ ಕೂಡ ರೈತರಿಗಾಗಿ ಕಡಿಮೆ ಮಾಡಿದೆ. ಆದರೆ ವಿಪಕ್ಷಗಳು ಕಾಯಿದೆ ವಿರೋಧಿಸುವ ಮೂಲಕ ರಾಜಕೀಯ ಮಾಡುತ್ತಿವೆ ಎಂದು ಗುಡುಗಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button