
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಸ್ರೇಲ್ ಕನ್ಸಲೇಟ್ ಜನರಲ್ ಜೊನಾಥನ್ ಜಡ್ಕಾ ಹಾಗೂ ಮಿಷನ್ ಉಪಮುಖ್ಯಸ್ಥ ಏರಿಯನಲ್ ಸೀಡ್ಮನ್ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಇಸ್ರೇಲ್ ಕೃಷಿ ತಂತ್ರಜ್ಞಾನ ಕುರಿತು ಚರ್ಚಿಸಿದರು.
ವಿಕಾಸಸೌಧದ ಕೃಷಿ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿದ ಇಸ್ರೇಲ್ ಪ್ರತಿನಿಧಿಗಳು, ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಮತ್ತು ಕರ್ನಾಟಕದ ನಡುವೆ ನಡೆಯುತ್ತಿರುವ ಸಹಭಾಗಿತ್ವ ಮತ್ತು ಮುಂದಿನ ದಾರಿ ಕುರಿತು ಮಹತ್ವದ ಚರ್ಚೆ ನಡೆಸಿದರು.
ಕೊಡಗಿನಲ್ಲಿ ಆಧುನಿಕ ಸೆನ್ಸಾರ್ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಈಗಾಗಲೇ ಇಸ್ರೇಲ್ ಸಹಭಾಗಿತ್ವದಲ್ಲಿ ಕಾಫಿ ಬೆಳೆಯಲ್ಲಿ ಅಳವಡಿಸಲಾಗುತ್ತಿದ್ದು, ಇದನ್ನು ರಾಜ್ಯದ ಬೇರೆ ಜಿಲ್ಲೆಗಳ ಕೃಷಿಗಳಲ್ಲಿ ಇಸ್ರೇಲ್ ಆಧುನಿಕ ಸೆನ್ಸಾರ್ ಸೂಕ್ಷ್ಮ ನೀರಾವರಿ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ಹಾಗೂ ಕರ್ನಾಟಕದಲ್ಲಿ ಇದಕ್ಕೆ ಉತ್ತೇಜನ ನೀಡಬೇಕೆಂದು ಮನವಿ ಮಾಡಿದರು. ಅಲ್ಲದೇ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಇಸ್ರೇಲ್ನ ಟೆಲಿವಿವಾ ವಿಶ್ವವಿದ್ಯಾಲಯ , ಮಾಶೋಮ್ ತರಬೇತಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಸಚಿವರ ಜೊತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ರೈತರನ್ನು ರೈತೋದ್ಯಮಿಗಳನ್ನಾಗಿಸಲು ಕೃಷಿ ನವೋದ್ಯಮಕ್ಕೆ ಇಲಾಖೆ ಹಾಗೂ ಕೃಷಿ ಸಚಿವರು ಉತ್ತೇಜನ ನೀಡುತ್ತಿರುವುದಕ್ಕೆ ಇಸ್ರೇಲ್ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿ.ಸಿ.ಪಾಟೀಲ್ ಮಾತನಾಡಿ, ಕೋಲಾರದಲ್ಲಿ ಅತ್ಯಂತ ಕಡಿಮೆ ನೀರಿನಲ್ಲಿಯೇ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಇಡೀ ರಾಜ್ಯಕ್ಕೆ ಕೋಲಾರದ ರೈತರು ಮಾದರಿಯಾಗಿದ್ದಾರೆ. ರಾಜ್ಯದಲ್ಲಿ ಕೋಲಾರ ಸಮಗ್ರ ಕೃಷಿ ಪದ್ಧತಿಯಡಿಯಲ್ಲಿಯೇ ಇಸ್ರೇಲ್ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಬಗ್ಗೆ ಇಸ್ರೇಲ್ ಪ್ರತಿನಿಧಿಗಳ ಜೊತೆ ಮಾಹಿತಿ ಹಂಚಿಕೊಂಡರು. ಸಹಭಾಗಿತ್ವ ಹಾಗೂ ಮುಂದಿನ ಹೆಜ್ಜೆ ಕುರಿತು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಭೇಟಿ ವೇಳೆ ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಸಿ.ಎಲ್.ಶಿವಕುಮಾರ್, ವಿಶೇಷ ಕರ್ತವ್ಯಾಧಿಕಾರಿಗಳಾದ ಎ.ಬಿ.ಪಾಟೀಲ್ ಹಾಗೂ ಮಂಜು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ