
ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ಬರುವ ಅನುದಾನ ತರುವ ಧಮ್ ಇಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಬಿ.ಸಿ ಪಾಟೀಲ್, ಧಮ್ಮು-ಕೆಮ್ಮು, ಏನ್ರೀ ಇವೆಲ್ಲಾ.. ಏನ್ ಭಾಷೆ ಇದು? ಇವೆಲ್ಲ ಒಳ್ಳೆಯ ಭಾಷೆನಾ? ವಿಪಕ್ಷ ನಾಯಕರಿಗೆ ಇಂತಹ ಭಾಷೆ ಶೋಭೆತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿ ಇರುವವರು ಆಡಳಿತ ಪಕ್ಷದ ತಪ್ಪುಗಳನ್ನು ತಿದ್ದಬೇಕು. ಅದನ್ನ ಬಿಟ್ಟು ಎಲ್ಲವನ್ನೂ, ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ಅವರಷ್ಟು ಸಭೆಗಳನ್ನು ಬೇರೆ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ. ಸಿಎಂ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಕೋವಿಡ್-19 ತಡೆಗಟ್ಟುವ ವಿಚಾರದಲ್ಲಿ ಸಿಎಂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.