Belagavi NewsBelgaum NewsKannada NewsKarnataka NewsPolitics

*ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಸನ ಸಭೆಯ ಪಾವಿತ್ರ್ಯತೆಯನ್ನು ಹಾಳು ಮಾಡಲು ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸದನದಲ್ಲಿ ಈ ನಾಡಿನ ಜನರ ಒಳಿತಿನ ಬಗೆಗಿನ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ, ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಲು ಸದನ ಬಳಸುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ. 

ಕೇಂದ್ರದಲ್ಲಿ ಮೋದಿಜಿಯವರು ಸುಧಾರಣೆಗಳನ್ನು‌ ತಂದು ಮನರೇಗಾವನ್ನು ವಿಬಿಜಿ ರಾಮ್ ಜಿ‌ ಮಾಡಿದ್ದಾರೆ‌. ದೇಶದ ಬಡವರು ಮತ್ತು ಕಾರ್ಮಿಕರಿಗೆ ಅನುಕೂಲ ಆಗಬೇಕು ಅಂತಾ ಈ‌ ಕಾಯ್ದೆಯನ್ನು ತಂದಿದ್ದಾರೆ. ಈ ಬಗ್ಗೆ ಚರ್ಚೆ ಮಾಡಬೇಕು ಎನ್ನುವ ನೆಪದಲ್ಲಿ ವಿಶೇಷ ಅಧಿವೇಶನ ಕರೆದು, ಒಂದು ರೀತಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರದ ವಿರುದ್ಧ ದ್ವೇಷ ಸಾಧಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

Home add -Advt

ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಬಗ್ಗೆ ಪದೇ‌ಪದೇ ಮಾತನಾಡುವ ಸಿದ್ದರಾಮಯ್ಯ ಅವರು ಒಕ್ಕೂಟ ವ್ಯವಸ್ಥೆ ಹಾಳು ಮಾಡುವಂತ ಕುತಂತ್ರವನ್ನು ನಡೆಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ನಾಡಿನ ಹಿತವನ್ನು ಮರೆತು ಪದೇ ಪದೇ ಕೇಂದ್ರ ಸರ್ಕಾರದ ವಿರುದ್ಧ ವಿಷ ಕಾರುವ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಒಳಿತಿನ ಬಗ್ಗೆ ಚಿಂತನೆ ಮಾಡದೇ ಜನರನ್ನು ಎತ್ತಿ ಕಟ್ಟುವುದರಲ್ಲೆ ಎರಡೂವರೇ ವರ್ಷ ಕಳೆದಿದ್ದಾರೆ ಎನ್ನುವುದು ಸತ್ಯ ಎಂದು ವಿಜಯೇಂದ್ರ ಕಿಡಿಕಾರಿದರು.

ಸಿದ್ದರಾಮಯ್ಯನವರು ಚಾಣಾಕ್ಷ ನಡೆ ಅನುಸರಿಸುತ್ತಿದ್ದಾರೆ. ಒಂದು ಕಡೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದು ಒಂದು ಆದ್ಯತೆ ಆದರೆ, ಮತ್ತೊಂದು ಕಡೆ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಕಾಲಹರಣ ಮಾಡುತ್ತಾ, ಡಿ.ಕೆ.ಶಿವಕುಮಾರ ಅವರಿಗೆ ಕೈ ಕೊಡುವುದಕ್ಕೆ ಈ ವಿಶೇಷ ಅಧಿವೇಶನವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ದೂರಿದರು.

ನಿಮ್ಮ‌ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿದೆ. ನೀವೇನು ಸಾಧನೆ ಮಾಡಿದ್ದಿರಿ..? ಜನಪರ ಯೋಜನೆಗಳನ್ನು ಏನು ಕೊಟ್ಟಿದ್ದಿರಿ..? ಏನು ಕಡೆದು ಕಟ್ಟೆ ಹಾಕಿದ್ದಿರಿ..? ಇದರ ಬಗ್ಗೆ ಚರ್ಚೆ ಮಾಡಿದರೆ ಒಳಿತು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಹರಿಹಾಯ್ದರು‌.

ಬಳ್ಳಾರಿ ಪಾದಯಾತ್ರೆ ವಿಚಾರಕ್ಕೆ ಯಾವುದೇ ಗೊಂದಲ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ಮಾಡುವಾಗ ಕೆಲವು ಗೊಂದಲಗಳಿಗೆ ಕಾರಣವಾಗಿತ್ತು. ಹಾಗಾಗಿ, ಈ ರೀತಿ ಯಾವುದೇ ಗೊಂದಲಗಳಿಗೆ ಅವಕಾಶ ಕೊಡಬಾರದು. ನಾನು ರಾಜ್ಯದ ಅಧ್ಯಕ್ಷನಾಗಿ ಹೋರಾಟ, ಪಾದಯಾತ್ರೆ ಸೇರಿ ಏನೇ ನಿರ್ಧಾರ ತೆಗೆದುಕೊಂಡರೂ ಕೂಡ ಕೇಂದ್ರದ ವರಿಷ್ಠರ ಗಮನಕ್ಕೆ ತಂದು ಆ ಮೇಲೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ರಾಜ್ಯದ ನಾಯಕರ ಜೊತೆಗೆ ಚರ್ಚಿಸಿದ್ದೇನೆ. ಅವರ ಅಭಿಪ್ರಾಯವನ್ನು ಕೇಂದ್ರದ ವರಿಷ್ಠರಿಗೆ ತಿಳಿಸಿದ್ದೇನೆ. ಇದೇ ಜ.19, 20ರಂದು ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿರುವುದರಿಂದ ತಡವಾಗಿದೆ‌.  ಆ ವೇಳೆ ನಾನು ದೆಹಲಿಯಲ್ಲಿ ಇರುತ್ತೇನೆ. ಅದಾಬ ಬಳಿಕ ವರಿಷ್ಠರ ಜೊತೆಗೆ ಚರ್ಚಿಸುತ್ತೇನೆ ಎಂದರು.

ರೆಡ್ಡಿ ಸಹೋದರರಿಗೆ ಬೆಂಬಲ ಕೊಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಈ ಎಲ್ಲವನ್ನೂ ಕೂಡ ಎಲ್ಲಿ ಚರ್ಚೆ ಮಾಡಬೇಕೋ ಮಾಡುತ್ತೇನೆ. ಆದರೆ, ಪಾದಯಾತ್ರೆ ಸಿಮೀತವಾಗಿ ಹೇಳುವುದಾದರೆ, ಪಾದಯಾತ್ರೆಗೆ ನನ್ನ ವಯಕ್ತಿಕ ವಿರೋಧ ಏನಿಲ್ಲ. ಅವತ್ತು ಹೇಳಿದ್ದೇನೆ, ಇವತ್ತೂ ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ಶ್ರೀರಾಮುಲು ಅವರ ನಿನ್ನೆಯ ಪತ್ರಿಕಾ ಹೇಳಿಕೆಯನ್ನು ಗಮನಿಸಿದ್ದೇನೆ. ಈ ಎಲ್ಲದರ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಕೇಂದ್ರದ ವರಿಷ್ಠರ ಜೊತೆಗೆ ಮಾತನಾಡಿದ್ದೇನೆ.  19, 20ರಂದು ದೆಹಲಿಗೆ ಬನ್ನಿ ಚರ್ಚೆ ಮಾಡೋಣ ಎಂದಿದ್ದಾರೆ. ಆ ವೇಳೆ ಚರ್ಚಿಸುತ್ತೇನೆ ಎಂದು ಹೇಳಿದರು.

ರಾಜ್ಯ ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ತಪ್ಪೇನಿದೆ..? ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿ ಈ ನಾಡಿಗೆ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ಹಾಗಾಗಿ, ಮತ್ತೆ ರಾಜ್ಯ ರಾಜಕಾಣಕ್ಕೆ ಬರುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ ಎಂದು ಅವರು ಸಮರ್ಥಿಸಿಕೊಂಡರು.

Related Articles

Back to top button