ಪ್ರಗತಿವಾಹಿನಿ ಸುದ್ದಿ; ಧಾರವಾಡ: ಹೆತ್ತವರಿಗೆ ಮೋಸ ಮಾಡುವಂತೆ ಮಾತೃ ಪಕ್ಷ ಬಿಟ್ಟು ಕುರ್ಚಿ ಆಸೆಗಾಗಿ ಬಿಜೆಪಿಗೆ ಹೋದ ನೀವು ಹೇಡಿಗಳೋ ಅಥವಾ ಸ್ವಾಭಿಮಾನದಿಂದ ಈ ದೇಶಕ್ಕೆ ಅನ್ನ ನೀಡುತ್ತಿರುವ ರೈತರು ಹೇಡಿಗಳೋ ಎಂಬುದನ್ನು ನೀವೇ ಹೇಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಸವಾಲು ಹಾಕಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರ್ಚಿಗಾಗಿ ನೀವು ರಾಜೀನಾಮೆ ಕೊಟ್ಟಿದ್ದೀರಿ. ಅರ್ಧ ಹೊಟ್ಟೆ ತುಂಬಿಸಿಕೊಂಡು ಜಗತ್ತಿಗೆ ರೈತ ಅನ್ನ ಹಾಕುತ್ತಿದ್ದಾನೆ. ಜಗತ್ತಿಗೆ ರಾಜಕಾರಣಿಗಳು ದುಡಿದು ಅನ್ನ ಹಾಕುತ್ತಾರಾ? ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಚಿವ ಪಾಟೀಲ ಅವರಿಗೆ ಬಾಬಾಗೌಡ ಸಲಹೆ ನೀಡಿದರು.
ಬಿ.ಸಿ.ಪಾಟೀಲ ಒಬ್ಬ ಒಳ್ಳೆಯ ವ್ಯಕ್ತಿ ಎಂದು ನಾವು ಭಾವಿಸಿದ್ದೆವು. ಈಗ ಒಳಗಿನ ಬಿ.ಸಿ.ಪಾಟೀಲ ಹೇಗಿದ್ದಾರೆ ಎಂದು ಗೊತ್ತಾಯ್ತು. ಅವರು ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅಯೋಗ್ಯರು. ಯಡಿಯೂರಪ್ಪನವರು ಕೂಡಲೇ ಬಿ.ಸಿ.ಪಾಟೀಲ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು ಎಂದರು.
ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ರಾಜ್ಯದ ಕೃಷಿ ತಜ್ಞರ ಹಾಗೂ ರೈತರೊಂದಿಗೆ ಚರ್ಚೆ ಮಾಡದೇ ಎಂಎನ್ ಸಿ ಕಂಪೆನಿಗಳೊಂದಿಗೆ ಚರ್ಚೆ ಮಾಡಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ದೇಶವನ್ನು ಎಂಎನ್ ಸಿ ಕಂಪೆನಿಗೆ ಕೊಟ್ಟಂತಾಗಿದೆ. ಈ ಕಾಯ್ದೆಗಳನ್ನು ನಾವು ಒಪ್ಪುವುದಿಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ