Kannada NewsLatestNational

*ರಾಮ ಮಂದಿರದ ಬಳಿಕ ಬದರಿನಾಥ ದೇವಾಲಯದಲ್ಲಿಯೂ ದೇಣಿಗೆ ದುರುಪಯೋಗ: ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ*

ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ, ಕಾಣಿಕೆ ಹಣ ಕಳ್ಳತನ ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ, ಇದೇ ವೇಳೆ ಮತ್ತೊಂದು ಪ್ರಸಿದ್ಧ ಹಿಂದೂ ಯಾತ್ರಾಸ್ಥಳ ಬದರಿನಾಥ ದೇವಾಲಯದಲ್ಲಿಯೂ ದೇಣಿಗೆ ಹಣ ದುರುಪಯೋಗ ಆರೋಪ ಕೇಳಿಬಂದಿದೆ. ಈ ವಿವಾದ ಭಾರಿ ಚರ್ಚೆಗೆ ಕಾರಣವಾಗಿದ್ದು, ಉತ್ತರಾಖಂಡ ಸರ್ಕಾರ ಹಗರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರ ಹಗರಣದ ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬ್ಯಾಲ್ ಹೊರಡಿಸಿರುವ ಆದೇಶದ ಪ್ರಕಾರ, ಈ ಉನ್ನತ ಮಟ್ಟದ ಸಮಿತಿಯು ಗರ್ವಾಲ್ ಆಯುಕ್ತ (ಕಮಿಷನರ್) ಆನಂದ್ ಸ್ವರೂಪ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ತಿವಾರಿ ಮತ್ತು ಹಣಕಾಸು ನಿರ್ದೇಶಕ ಜಗತ್ ಸಿಂಗ್ ಚೌಹಾಣ್ ಇದರ ಇತರ ಸದಸ್ಯರಾಗಿದ್ದಾರೆ.

ಈ ಸಮಿತಿಯು ದೇಣಿಗೆ ಅಕ್ರಮಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಮುಂದಿನ 15 ದಿನಗಳ ಒಳಗಾಗಿ ತನ್ನ ವರದಿ ಹಾಗೂ ಕಠಿಣ ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ದೇವಾಲಯದ ಆಡಳಿತ ಮತ್ತು ಹಣದ ಎಣಿಕೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಫೂಲ್‌ಪ್ರೂಫ್ ಮಾಡುವ ಜವಾಬ್ದಾರಿಯನ್ನೂ ಈ ಸಮಿತಿಗೆ ನೀಡಲಾಗಿದೆ.

ಇದೇ ವೇಳೆ, ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ, ದೇವಾಲಯ ಸಮಿತಿಯ ಖಾಸಗಿ ಕಾರ್ಯದರ್ಶಿಯಾಗಿದ್ದ ಪ್ರಮೋದ್ ನೌಟಿಯಾಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ.

Home add -Advt


Related Articles

Back to top button