ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ನಡುವೆ ಬಾಗಲಕೋಟೆ ಜಿಲ್ಲೆಯಲ್ಲಿ 75 ವರ್ಷದ ವೃದ್ದನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸೋಂಕಿತ ವ್ಯಕ್ತಿಯು ವಾಸಿಸುವ ಸುತ್ತಮುತ್ತಲಿನ ವ್ಯಾಪ್ತಿಯ 5 ಕಿಮೀ ಪ್ರದೇಶಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕರು ಮನೆ ಬಿಟ್ಟು ಹೊರಬರದಂತೆ ಜಿಲ್ಲಾಧಿಕಾರಿ ಡಾ.ಕೆ ರಾಜೇಂದ್ರ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಶನ್ ವಾರ್ಡ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾಡಲಾಗಿದ್ದು, ಅಲ್ಲಿರುವ ರೋಗಿಗಳನ್ನು ಹಳೇ ಬಾಗಲಕೋಟೆಯಲ್ಲಿರುವ 50 ಹಾಸಿಗೆಯ ಆಸ್ಪತ್ರೆ ಹಾಗೂ ಕುಮಾರೇಶ್ವರ ಆಸ್ಪತ್ರೆಗೆ ರವಾನಿಸಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲಾಗುವುದೆಂದು ತಿಳಿಸಿದರು.
ಸೋಂಕಿತ ವ್ಯಕ್ತಿಯನ್ನು ಕಳೆದ 15 ದಿನಗಳಲ್ಲಿ ಯಾರು ಸಂಪರ್ಕ ಹೊಂದಿದ್ದಾರೆಯೋ ಅವರನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೇ ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸಿದವರು ಸ್ವಯಂ ಪ್ರೇರಿತರಾಗಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ್ ಬಿರಾದಾರ ಅವರ ದೂರವಾಣಿ ಸಂಖ್ಯೆ:9449843160 ಗೆ ಕೂಡಲೇ ಸಂಪರ್ಕಿಸಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ