ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಪ್ಯಾಸ್ ಫೌಂಡೇಶನ್ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಕೆರೆಯ ಕಾಮಗಾರಿಯನ್ನು ಕೈಗೊಂಡು ಪುನರುಜ್ಜೀವನಗೊಳಿಸಿದೆ.
ಶನಿವಾರ ಬೆಳಗ್ಗೆ 11 ಗಂಟೆಗೆ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಕೆರಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಿದ್ದಾರೆ.
ಪ್ಯಾಸ್ ಫೌಂಡೇಶನ್ ಪರಿಚಯ
ಮಳೆಯಿಂದಾಗಿ ಅತೀವೃಷ್ಟಿಯಾದರೆ ಜನತೆ ಹೇಗೋ ಬದುಕಬಹುದು; ಆದರೆ ನೀರೇ ಇಲ್ಲದೆ ಬದುಕು ಕಟ್ಟಿಕೊಳ್ಳುವುದು ದುಸ್ತರ. ಜಲವೇ ಜೀವದ ಮೂಲ. ಜಲವಿಲ್ಲದ ಬದುಕನ್ನು ಊಹಿಸುವುದು ಕಷ್ಟ. ಇಂದು ಮಳೆ ಕೊಯ್ಲು, ವಿವಿಧ ರೀತಿಯ ಜಲ ಸಂಗ್ರಹ, ಜಲ ಸಂರಕ್ಷಣೆ ಕುರಿತು ಜನ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೂ ನೀರಿನ ಭವಣೆ ತಪ್ಪುತ್ತಿಲ್ಲ. ಈ ನಿಟ್ಟಿನಲ್ಲಿ ಲಕ್ಷಾಂತರ ಕುಟುಂಬಗಳಿಗೆ ಜಲಕ್ಷಾಮದಿಂದ ಪಾರುಮಾಡಲು ಟೊಂಕಕಟ್ಟಿ ನಿಂತ ಸಂಸ್ಥೆಗಳಲ್ಲಿ ಪ್ಯಾಸ್ ಫೌಂಡೇಶನ್ ಕೊಡುಗೆ ಅಪಾರ ಹಾಗೂ ಅನುಪಮವೆನಿಸಿದೆ.
೨೦೧೬ ರಲ್ಲಿ ಸ್ಥಾಪನೆಗೊಂಡ ಪ್ಯಾಸ್ ಫೌಂಡೇಶನ್ ಸದಸ್ಯರು ನೀರಿನ ಸಂಕಷ್ಟದಿಂದ ತೊಂದರೆಗೊಳಗಾದ ಬೆಳಗಾವಿ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿನ ಹೂಳು ತುಂಬಿರುವ ಕೆರೆಗಳ ಹೂಳನ್ನು ಜೆಸಿಬಿಗಳ ಮೂಲಕ ಎತ್ತಿ, ಕೆರೆಗಳಿಗೆ ಕಾಯಕಲ್ಪ ನೀಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅರಳೀಕಟ್ಟಿ, ಪ್ರಭುನಗರ, ಮಚ್ಚೆ, ಸುಳಗಾ, ಆಮಟೆ, ಕಿತ್ತೂರು, ಬೈಲಹೊಂಗಲ ತಾಲೂಕಿನ ಭಾಂವಿಹಾಳ, ಬೈಲವಾಡ ಗ್ರಾಮಗಳಲ್ಲಿಯ ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದು ಮಾತ್ರವಲ್ಲದೇ ಬಾವಿಗಳಿಗೂ ಕಾಯಕಲ್ಪ ನೀಡಿದೆ. ಇಲ್ಲಿಯವರೆಗೆ ಪ್ಯಾಸ್ ಫೌಂಡೇಶನ್ 9 ಕೆರೆಗಳನ್ನು ಸಂಪೂರ್ಣವಾಗಿ ಪುನರುಜ್ಜೀವನಗೊಳಿಸಿದೆ.
ಅಗಸ್ಟ್ ತಿಂಗಳಲ್ಲಿ ಬಂದ ನೆರೆಹಾವಳಿಯಲ್ಲಿ ಬೆಳಗಾವಿ ನಗರದ ಜನತೆ ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಪರಿತಪಿಸಿತು. ಬೆಳಗಾವಿಗೆ ಸರಬರಾಜು ಮಾಡುವ ರಕ್ಕಸಕೊಪ್ಪ ನೀರೆತ್ತುವ ಯಂತ್ರಗಳು ಸ್ಥಗಿತವಾಗಿ ಹಲವಾರು ದಿನಗಳ ವರೆಗೆ ತೊಂದರೆ ಉಂಟಾಯಿತು. ಈ ಸಂದರ್ಭದಲ್ಲಿ ಪ್ಯಾಸ್ ಫೌಂಡೇಶನ್ ಕುಡಿಯುವ ಶುದ್ಧ ನೀರನ್ನು ಸರಬುರಾಜು ಮಾಡಿ ಜನತೆಯ ದಾಹವನ್ನು ಪೂರೈಸಿತು.
ನೀರಿನ ನಿರ್ವಹಣೆಯ ಜವಾಬ್ದಾರಿಯನ್ನೇ ಹೊತ್ತು ಅಸ್ತಿತ್ವಕ್ಕೆ ಬಂದಿರುವ ಪ್ಯಾಸ್ ಫೌಂಡೇಶನ್ ಜಿಲ್ಲೆಯ ಹಾಗೂ ತಾಲೂಕಿನ ಹಲವಾರು ಪ್ರದೇಶಗಳಿಗೂ ವಿಸ್ತರಿಸಿದೆ. ಪ್ಯಾಸ್ ಫೌಂಡೇಶನ್ ಬೇಸಿಗೆ ಕಾಲದಲ್ಲಿ ಪ್ರತಿದಿನ ೧೬ ಟ್ಯಾಂಕರ್ ಮೂಲಕ ೬,೪೦,೦೦೦ ಲೀಟರ್ ನೀರನ್ನು ನಿತ್ಯಪೂರೈಸಿದೆ. ಇಲ್ಲಿಯವರೆಗೆ ಜಿಲ್ಲೆಯ ೩೦ ಗ್ರಾಮಗಳಿಗೆ ನೀರನ್ನು ಪೂರೈಸಿದೆ. ಒಟ್ಟು ೧ ಲಕ್ಷ ಗ್ರಾಮೀಣ ಜನತೆ ನೀರಿನ ಪ್ರಯೋಜನ ಪಡೆದಿದ್ದಾರೆ. ೫೦ ಸಾವಿರಕ್ಕೂ ಹೆಚ್ಚು ನಗರವಾಸಿಗಳು ಶುದ್ಧ ನೀರನ್ನು ಪಡೆದಿದ್ದಾರೆ. ಸುಮಾರು ೫೦೦೦ ಪ್ರಾಣಿಗಳಿಗೂ ನೀರನ್ನು ಪೂರೈಸಲಾಗಿದೆ.
ಪ್ಯಾಸ್ ಫೌಂಡೇಶನ್ ಸರ್ಕಾರದಿಂದ ಯಾವುದೇ ಸವಲತ್ತುಗಳನ್ನು, ಧನಸಹಾಯವನ್ನು ಪಡೆದಿಲ್ಲ. ಯಾವುದೇ ಸಂಘ ಸಂಸ್ಥೆಗಳಿಂದ ಸಹಾಯ ಹಸ್ತವನ್ನು ಚಾಚಿಲ್ಲ. ಸಂಸ್ಥಾಪಕ ಸದಸ್ಯರು ಹಾಗೂ ಅವರ ಸ್ನೇಹಿತರೇ ಆರ್ಥಿಕ ಜವಾಬ್ದಾರಿಗಳನ್ನು ಹೊತ್ತು ಕೆರೆಗಳ ಪುನರುಜ್ಜೀವನದ ಮಹತ್‌ಕಾರ್ಯದಲ್ಲಿ ತೊಡಗಿದ್ದಾರೆ.
ಇತ್ತೀಚಿಗೆ ಬೆಳಗಾವಿಯ ಎಂಎಲ್‌ಆರ್‌ಸಿ ಕ್ಯಾಂಪ್ ಆವರಣದಲ್ಲಿ ಜರುಗಿದ ಸೈನ್ಯ ಭರ್ತಿಗಾಗಿ ಬಂದಿದ್ದ ಅಭ್ಯರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿದ್ದಾರೆ.
ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯರಾಗಿರುವ ಡಾ.ಮಾಧವ ಪ್ರಭು ಈ ಫೌಂಡೇಶನ್ ಅಧ್ಯಕ್ಷರಾಗಿ, ಅಭಿಮನ್ಯು ಡಾಗಾ ಉಪಾಧ್ಯಕ್ಷರಾಗಿ, ರೋಹನ ಕುಲಕರ್ಣಿ ಕಾರ್ಯದರ್ಶಿಗಳಾಗಿ, ಕೆಎಲ್‌ಇ ಸಂಸ್ಥೆಯ ಆಜೀವ ಸದಸ್ಯರಾದ ಡಾ.ಪ್ರೀತಿ ದೊಡವಾಡ ಖಜಾಂಚಿಯಾಗಿ ಈ ಫೌಂಡೇಶನದಲ್ಲಿ ಸಕ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕುರಿತು ಡಾ.ಮಾಧವ ಪ್ರಭು ಅವರು ಮಾತನಾಡುತ್ತ, ’ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ಜನರು ನೀರಿಗಾಗಿ ಪರಿತಪಿಸುತ್ತಿದ್ದ ತೊಂದರೆಗಳನ್ನು ನೋಡಿ ಏನಾದರೂ ಸಮಾಜಕ್ಕೆ ಒಂದು ವಿಶೇಷವಾದ ಕೆಲಸವನ್ನು ಮಾಡಬೇಕೆಂಬ ಸಂಕಲ್ಪದಿಂದ ಈ ಜಲಸೇವೆಗೆ ಚಾಲನೆ ನೀಡಿದ್ದೇವೆ. ಜಲ ಸಂರಕ್ಷಣೆ ಹಾಗೂ ಶುದ್ಧ ಕುಡಿಯುವ ನೀರಿನ ಸರಬರಾಜು ಅಷ್ಟೇ ಅಲ್ಲದೆ ಕೆರೆಗಳನ್ನು ಪುನರ್ ನಿರ್ಮಾಣ ಮಾಡಬೇಕೆಂಬ ಉದ್ದೇಶಕ್ಕೂ ಚಾಲನೆ ನೀಡಿದ್ದೇವೆ. ಆರಂಭದಲ್ಲಿ ಇದಕ್ಕೆ ಬೆಳಗಾವಿ ಹತ್ತಿರ ವಿರುವ ಮಚ್ಚೆ ಗ್ರಾಮದ ಕೆರೆಯ ಕಾಮಗಾರಿಯು ನಮಗೆ ಸ್ಫೂರ್ತಿಯನ್ನು ತುಂಬಿತು’ ಎನ್ನುತ್ತಾರೆ.
ಹಲವಾರು ಗ್ರಾಮಗಳಲ್ಲಿ ಅವರು ಕೈಗೊಂಡಿರುವ ಕಾಮಗಾರಿಗಳಿಂದ ಕೆರೆಗಳು ಮೈತುಂಬಿ ಕೊಂಡಿವೆ. ಅಂತರ್ಜಲದ ಮಟ್ಟವು ಹೆಚ್ಚಾಗಿದೆ, ಬೆಳೆಗಳ ಜಾನುವಾರುಗಳ ಜಲದಾಹವನ್ನು ನೀಗಿಸಿವೆ. ಭವಿಷ್ಯತ್ತಿನಲ್ಲಿ ಸ್ಥಳೀಯರು ಕೆರೆಗಳನ್ನು ಹಾಗೂ ಜಲಮೂಲಗಳನ್ನು ಸರಿಯಾಗಿ ನಿರ್ವಹಿಸಿದ್ದೇ ಆದರೆ, ಪ್ಯಾಸ್ ಫೌಂಡೇಶನ್ ಕೈಗೊಂಡ ಕಾರ್ಯ ಸಾರ್ಥಕಗೊಳ್ಳುವುದರಲ್ಲಿ ಸಂದೇಹವಿಲ್ಲ.
ಕೆರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಗ್ರಾಮಸ್ಥರ ಮೊದಲ ಆದ್ಯತೆಯಾಗಬೇಕು. ಕೆರೆಯಲ್ಲಿ ದನಕರುಗಳನ್ನು ತೊಳೆಯದೆ, ಮಲಮೂತ್ರಾದಿಗಳು, ಕಾರ್ಖಾನೆಗಳ ತ್ಯಾಜ್ಯಗಳು, ಕಸಕಡ್ಡಿಗಳನ್ನು ಎಸೆಯದೆ ನೀರನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಧ್ಯೇಯವಾಗಬೇಕಾಗಿದೆ. ಇಂದು ನಗರಗಳು ಗ್ರಾಮಗಳು ವಿಸ್ತಾರಗೊಳ್ಳುತ್ತಿವೆ ಇದರ ಫಲವಾಗಿ ಕೆರೆಗಳು ನಿರ್ನಾಮಗೊಂಡಿವೆ. ಹಾಗಾಗದಂತೆ ನೋಡಿಕೊಳ್ಳುವುದು ಎಲ್ಲರ ಅಗತ್ಯಕೂಡ.
ಪುನರುಜ್ಜೀವನಗೊಂಡ ಕೆರೆಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಗ್ರಾಮ ಪಂಚಾಯತಿಗಳು ಹಾಗೂ ಕಾರ್ಯನಿವಾರ್ಹಕ ಅಭಿಯಂತರರ ಜವಾಬ್ದಾರಿಯು ಅಗತ್ಯ ಎಂಬುದು ಪ್ಯಾಸ್ ಫೌಂಡೇಶನ್ ಸದಸ್ಯರ ಮನವಿ ಕೂಡ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ