Kannada NewsLatest

ಶ್ರೀಸಾಮಾನ್ಯನಿಂದ ಶ್ರೀಸಾಮಾನ್ಯರಿಗೆ ರೂಪಿಸಲಾದ ಉತ್ತಮ ಆಯವ್ಯಯ: ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸ್ಥಾಪಿಸಲು ಸರ್ಕಾರ ಉದ್ಧೇಶಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ 2022-23ನೇ ಸಾಲಿನ ಆಯವ್ಯಯವನ್ನು ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಈ ಉದ್ದೇಶಿತ ಬ್ಯಾಂಕಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ, ಕರ್ನಾಟಕ ಹಾಲು ಮಹಾಮಂಡಳ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಒಟ್ಟಾರೆ 260 ಕೋಟಿ ರೂ. ಮತ್ತು ರಾಜ್ಯ ಸರ್ಕಾರವು ಇದಕ್ಕಾಗಿ 100 ಕೋಟಿ ರೂ.ಗಳ ಶೇರು ಬಂಡವಾಳವನ್ನು ಒದಗಿಸಲಿದೆ ಎಂದು ಹೇಳಿದರು.

ಹಾವೇರಿ ಜಿಲ್ಲೆಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೇಘಾ ಡೇರಿಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಹಾಲು ಒಕ್ಕೂಟದ ಸಹಯೋಗದೊಂದಿಗೆ ಶಿವಮೊಗ್ಗ, ದಾವಣಗೆರೆ-ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಜಿಲ್ಲಾ ಒಕ್ಕೂಟಗಳನ್ನು ರಚಿಸಲು ತೀರ್ಮಾಣಿಸಿರುವುದು ಸ್ವಾಗತಾರ್ಹವಾಗಿದೆ. ರಾಜ್ಯದ ಸ್ಥಳೀಯ ಗೋ ತಳಿಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂತತಿಯನ್ನು ಹೆಚ್ಚಿಸಲು ಕೆಎಂಎಫ್ ಮೂಲಕ 2000 ಗೋ ತಳಿಗಳನ್ನು ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ. ಜೊತೆಗೆ ಗೋ-ಉತ್ಪನ್ನಗಳ ಮಾರಾಟಕ್ಕಾಗಿ ಗೋ-ಮಾತಾ ಸಹಕಾರಿ ಸಂಘವನ್ನು ಸ್ಥಾಪಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ.

ರೈತ ಬಾಂಧವರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಲು ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿಗೊಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳು ಲಭಿಸಲಿವೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಕೊಡುಗೆಗಳನ್ನು ನೀಡಿದ್ದು, ಅಥಣಿಗೆ ಕೃಷಿ ಹೊಸ ಕಾಲೇಜ್‌ನ್ನು ಮಂಜೂರು ಮಾಡಿಸಿದ್ದಾರೆ. ಬೆಳಗಾವಿಗೆ 150ಕೋಟಿ ರೂ. ವೆಚ್ಚದಲ್ಲಿ ಗ್ಲೋಬಲ್ ಎಮರ್ಜಿಂಗ್ ಟೆಕ್ನಾಲಾನಿ ಡಿಸೈನ್ ಸೆಂಟರ್ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ಬೆಳಗಾವಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪನೆಗೆ ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಸಹಾಯಕರು, ಪೌರಕಾರ್ಮಿಕರು ಹಾಗೂ ಬಿಸಿಯೂಟ ತಯಾರಿಕರು ಹಾಗೂ ಸಹಾಯಕರ ಗೌರವಧನ ಹೆಚ್ಚಿಸಿರುವದನ್ನು ಅವರು ಅಭಿನಂದಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಮುಂಗಡ ಪತ್ರ ಎಲ್ಲ ವರ್ಗಗಳ ಹಿತಕಾಯುವ ಅತ್ಯುತ್ತಮ ಬಜೆಟ್ ಇದಾಗಿದೆ. ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ಸಾಕಷ್ಟು ಜನಪರ ಹಾಗೂ ರೈತಪರ ಯೋಜನೆಗಳನ್ನು ಪ್ರಕಟಿಸಲಾಗಿದೆ. ಕೋವಿಡ್ ನಂತರದ ದಿನಗಳಲ್ಲಿ ಸರ್ಕಾರ ಆರ್ಥಿಕ ಪ್ರಗತಿಯನ್ನು ಸರಿ ದಾರಿಗೆ ತರಲು ಈ ಬಜೆಟ್ ಪೂರಕವಾಗಿದೆ. ರಾಜ್ಯದ ಸರ್ವತೋಮುಖ ಪ್ರಗತಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿಗಳ ಕನಸಿನಂತೆ ರೈತರ ಆದಾಯ ದ್ವಿಗುಣಗೊಳಿಸಲು ನಿಖರವಾದ ಉಪ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಮಹಿಳೆಯರು, ಹಿಂದುಳಿದ ವರ್ಗದವರು ಪ.ಜಾ-ಪ.ಪಂ ಆರ್ಥಿಕವಾಗಿ ದುರ್ಬಲ ವರ್ಗದವರು ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುವಂತೆ ಮಾಡಲು ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಜಾರಿಗೊಳಿಸುವ ಧ್ಯೇಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದಾಗಿದೆ. ವಿವಿಧ ಸಮಾಜಗಳ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಒದಗಿಸುವ ಮೂಲಕ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಲಾಗಿದೆ. ಇದೊಂದು ಶ್ರೀಸಾಮಾನ್ಯನಿಂದ ಶ್ರೀಸಾಮಾನ್ಯರಿಗೆ ರೂಪಿಸಲಾದ ಆಯವ್ಯಯವಾಗಿದೆ. ರೈತರ ಅಭ್ಯುದಯಕ್ಕಾಗಿ ಅತ್ಯುತ್ತಮ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಮಸ್ತ ರೈತ ಬಾಂಧವರಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ  ಹೇಳಿದ್ದಾರೆ.

ಆನೆ ಬಲ ತುಂಬಿದ ಬಜೆಟ್: ಸಚಿವೆ ಶಶಿಕಲಾ ಜೊಲ್ಲೆ, ಅಣ್ಣಾ ಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button