Kannada NewsLatest

ಎಲ್ಲ ಮಹಾತ್ಮರ ಜಯಂತಿಗಳು ಒಂದೇ ದಿನ!

  ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ:

ಎಲ್ಲ ಮಹಾನ್ ಪುರುಷರ ಜಯಂತಿಗಳನ್ನು ಒಂದೇ ದಿನ ಆಚರಿಸುವ ಮೂಲಕ ಸಂಗನಕೇರಿ ಗ್ರಾಮಸ್ಥರು ಇತರರಿಗೆ ಮಾದರಿಯಾಗಿದ್ದಾರೆ. ವಿಶಿಷ್ಠ ಹಾಗೂ ವಿನೂತನ ಕಾರ್ಯಕ್ರಮ ಮಹಾನ್ ಪುರುಷರ ಸಾಮೂಹಿಕ ಜಯಂತಿ ಕಾರ್ಯಕ್ರಮಗಳು ಎಲ್ಲಡೆ ಒಂದೇ ವೇದಿಕೆಯಲ್ಲಿ ಆಚರಿಸುವಂತಾಗಬೇಕು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಸಂಗನಕೇರಿ ಗ್ರಾಮದಲ್ಲಿ ರವಿವಾರ ಸಂಜೆ ಹಣಮಂತ ದೇವರ ದೇವಸ್ಥಾನದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಮಹಾನ ಪುರುಷರ ಸಾಮೂಹಿಕ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥ ಎಂಬ ಭೇದ-ಭಾವವಿಲ್ಲದೇ ಗ್ರಾಮಸ್ಥರು ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಏಕತೆಯಿಂದ ಸಾಮೂಹಿಕವಾಗಿ ಜಯಂತಿ ಕಾರ್ಯಕ್ರಮ ಆಯೋಜಿಸಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಮಹಾನ್ ಪುರುಷರನ್ನು ಕೇವಲ ಒಂದೇ ಜಾತಿಗೆ ಸೀಮಿತಗೊಳಿಸಬೇಡಿ. ಎಲ್ಲ ಮಹಾನ್ ಪುರುಷರು ಮಾನವತೆಯ ನೆಲಗಟ್ಟಿನ ಮೇಲೆ ಸರ್ವ ಜನಾಂಗಕ್ಕೂ ಒಳಿತನ್ನು ಬಯಸಿದ್ದಾರೆ. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆಗಾಗಿ ಹೋರಾಟ ನಡೆಸಿ ಸರ್ವರಿಗೂ ಸಮಬಾಳು ಹಾಗೂ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟು ಜಾತ್ಯತೀತತೆಗೆ ಅಡಿಪಾಯ ಹಾಕಿದ್ದಾರೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಹುಣಶ್ಯಾಳ ಪಿ.ಜಿ.ಯ ನಿಜಗುಣ ದೇವರು ವಹಿಸಿದ್ದರು. ಸಾನಿಧ್ಯವನ್ನು ಹೂಲಿಕಟ್ಟಿಯ ಕುಮಾರ ದೇವರು ವಹಿಸಿದ್ದರು. ಅರಭಾವಿಯ ವೇದಮೂರ್ತಿ ಶಿವಯ್ಯ ಹಿರೇಮಠ, ಚಂದ್ರಶೇಖರ ಮಠದ ಮಹಾದೇವ ದೇವರು ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಬಸವರಾಜ ಮಾಳೆದವರ, ಕಾಶಪ್ಪ ಕೋಳಿ, ಮುತ್ತೆಪ್ಪ ಝಲ್ಲಿ, ಬಿ.ಟಿ.ಸಂಪಗಾಂವಿ, ಲಕ್ಷ್ಮಣ ನಿಂಗನ್ನವರ, ಕೆಂಚಪ್ಪ ಮಂಟೂರ, ಭೀಮಶಿ ಮಾಳ್ಯಾಗೋಳ, ಹಣಮಂತ ಚಿಪ್ಪಲಕಟ್ಟಿ,  ಚಂದ್ರಕಾಂತ ಉಪ್ಪಾರಟ್ಟಿ, ಮಹೇಶ ಚಿಕ್ಕೋಡಿ, ಬಸು ಆಲೋಶಿ, ಕುಮಾರ ಮಾಳೆದವರ, ರಮೇಶ ಬಿಲಕುಂದಿ, ವಿಠ್ಠಲ ದೇವುಗೋಳ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.
ಮನುಕುಲದ ವಿಶ್ವಚೇತನಗಳಾದ ಬಸವೇಶ್ವರ, ಭಗೀರಥ, ಕನಕದಾಸ, ಶಿವಾಜಿ ಮಹಾರಾಜ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ವಾಲ್ಮೀಕಿ, ಅಂಬೇಡ್ಕರ ಅವರುಗಳ ಜಯಂತಿ ಕಾರ್ಯಕ್ರಮದ ನಿಮಿತ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ಸಾರ್ವಜನಿಕರ ಗಮನ ಸೆಳೆಯಿತು. ಕಾರ್ಯಕ್ರಮಕ್ಕೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button