Latest

ಹೆದ್ದಾರಿ ರಾಜಕೀಯ ಬಿಡಿ, ಸಾಧನೆ ನೋಡಿ; ವಿಪಕ್ಷಗಳಿಗೆ ಸಚಿವ ಸಿ.ಸಿ.ಪಾಟೀಲರ ತಾಕಿತು

ಬೆಂಗಳೂರು: ಪ್ರಸ್ತುತ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ವಿಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಈಗ ನಿದ್ದೆಯಿಂದ ಎಚ್ಚರಗೊಂಡಂತೆ ಬಿಜೆಪಿ ಸರ್ಕಾರ ನಿರ್ಮಿಸಿರುವ ಹೆದ್ದಾರಿಗಳ ಮೇಲೆ ತಮ್ಮ ಪಕ್ಷದ ಬಾವುಟ ಹಾರಿಸಿಕೊಳ್ಳಲು ಹುನ್ನಾರ ನಡೆಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ವಧು ನೋಡಲು ಆರೆಂಟು ಜನ ಹೋಗಬಹುದು. ಆದರೆ ಮದುವೆ ಆಗುವವನು ಒಬ್ಬ ವರನೇ ಹೊರತು ಉಳಿದ ಆರೇಳು ಮಂದಿಯಲ್ಲ. ಹಾಗೆಯೇ ಈ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಈಗ ಕೈಗೂಡುತ್ತಿರುವ ಹೊತ್ತಿಗೆ ವಿರೋಧ ಪಕ್ಷಗಳ ಆರೆಂಟು ಮುಖಂಡರು ಭಾಸಿಂಗ ಕಟ್ಟಿಕೊಂಡು ಮುಂದೆ ಬಂದಿರುವುದು ವಿಚಿತ್ರ. ಆದರೆ ಜನರಿಗೆ ಗೊತ್ತಿದೆ. ದಾಖಲೆಗಳಲ್ಲೂ ನಮೂದಾಗಿದೆ. ಸನ್ಮಾನ್ಯ ಮೋದಿಜಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರದ ಕೊಡುಗೆ, ಈ ಎಕ್ಸ್ ಪ್ರೆಸ್ ಹೆದ್ದಾರಿಯ ಕನಸು ನನಸು ಮಾಡುವಲ್ಲಿ ಎಷ್ಟೊಂದಿದೆ ಎಂಬುದನ್ನು ದಾಖಲೆಗಳೇ ತಿಳಿಸುತ್ತವೆ ಎಂದಿದ್ದಾರೆ.

ಈಗ ಉದ್ಘಾಟನೆಗೆ ಸಿದ್ಧವಾಗಿರುವ ಈ ಎಕ್ಸ್ ಪ್ರೆಸ್ ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವಾಗ ವಿರೋಧ ಪಕ್ಷದ ನಾಯಕರಿಗೆ ಅಲ್ಲಿಗೆ ತೆರಳಿ ಪರಿಶೀಲಿಸುವುದಕ್ಕೂ ಪುರುಸೊತ್ತಿರಲಿಲ್ಲ. ಕಳೆದ ಬಾರಿ ಮಳೆಗಾಲದಲ್ಲಿ ಈ ಹೆದ್ದಾರಿಯಲ್ಲಿ ನೀರು ನಿಂತು ಸಮಸ್ಯೆಯಾದಾಗ ಇದು ತಮ್ಮದೇ ಹೆದ್ದಾರಿಯೆಂದು ಆಗ ಯಾರೂ ಬಾಯಿ ಬಿಟ್ಟಿರಲಿಲ್ಲ. ಬದಲಿಗೆ ಇದು ಬಿಜೆಪಿ ಸರ್ಕಾರದ ಕೆಲಸ ಎಂದೇ ಅವರು ಟೀಕಿಸಿದ್ದರು. ಆದರೆ ಈಗ ಇದೇ ಹೆದ್ದಾರಿಯನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ವಿಶ್ವ ದರ್ಜೆಯಲ್ಲಿ ನಿರೂಪಿಸಿ, ಬೆಂಗಳೂರು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಮೂರು ತಾಸಿನಿಂದ 75 ನಿಮಿಷಗಳಿಗೆ ಇಳಿಸಿರುವಾಗ ಈ ಸಾಧನೆ ತನ್ನದು, ತಮ್ಮ ಪಕ್ಷದ್ದು ಎಂದು ಕೆಲವರು ಕತೆ ಕಟ್ಟುತ್ತಾ ಸನ್ಮಾನ್ಯ ಮೋದಿಜಿ ಅವರು ಇದನ್ನು ಲೋಕಾರ್ಪಣೆ ಮಾಡಬಾರದು ಎಂದು ಖ್ಯಾತೆ ತೆಗೆದಿರುವುದು ಖಂಡನೀಯ.

ಏಕೆಂದರೆ ಈ ಹೆದ್ದಾರಿ ನಿರ್ಮಾಣದ ರೂವಾರಿ ಸನ್ಮಾನ್ಯ ಮೋದಿ ಜಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿಯವರೇ ಆಗಿರುವುದರಿಂದ ಈ ಬಗ್ಗೆ ಮಾತನಾಡಲು ಈ ವಿಪಕ್ಷದವರಿಗೆ ನೈತಿಕತೆಯಾದರೂ ಎಲ್ಲಿದೆ ? ಎಂದು ಪ್ರಶ್ನಿಸಿದ್ದಾರೆ.

ಇವರು ಮೊಸರಿನಲ್ಲಿ ಕಲ್ಲು ಹುಡುಕುವವರಷ್ಟೇ ಅಲ್ಲ, ಇವರು ಮೊಸರಿಗೇ ಕಲ್ಲು ಹಾಕುವವರು ಎಂಬುದು ಅವರ ಈ ನಡೆಯಿಂದ ಗೊತ್ತಾಗುತ್ತದೆ.

2018 ಫೆಬ್ರುವರಿ 12 ರಂದು ಮೋದಿಜಿ ಅವರು ಮೈಸೂರಿಗೆ ಆಗಮಿಸಿದಾಗ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣದ ಬಗ್ಗೆ ಮೊದಲ ಬಾರಿಗೆ ಸ್ವತಃ ಘೋಷಿಸಿದ್ದರು. ಇದರ ವಿಡಿಯೋ ಕೂಡ ದಾಖಲೆಯಾಗಿ ಇಂದಿಗೂ ಲಭ್ಯವಿದೆ.

ತದನಂತರ ದೆಹಲಿಗೆ ವಾಪಸ್ ಆದ ಒಂದು ವಾರದಲ್ಲಿಯೇ ಪ್ರಧಾನಿ ಮೋದಿಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಎಕನಾಮಿಕ್ ಅಫೇರ್ಸ್ ಸಮಿತಿ ಸಭೆಯಲ್ಲಿ ಬೆಂಗಳೂರು ಮೈಸೂರು ನಿಡಘಟ್ಟ ಹೆದ್ದಾರಿ ನಿರ್ಮಾಣಕ್ಕೆ ಅನುಮತಿ ನೀಡಿದ್ದರಿಂದ ಈ ಯೋಜನೆ ಜಾರಿಗೆ ಬರುವಂತಾಯಿತು. ಇದಾಗಿ ಕೇವಲ ಒಂದು ತಿಂಗಳಿನಲ್ಲಿಯೇ ಅಂದರೆ 2018 ಮಾರ್ಚ್ 24ರಂದು ಕೇಂದ್ರ ಸಚಿವರಾದ ಗಡ್ಕರಿಯವರು ಈ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ತರುವಾಯ ಕೇವಲ ಐದು ವರ್ಷಗಳ ಅವಧಿಯ ದಾಖಲೆ ಸಮಯದಲ್ಲೇ ಈಗ ಈ ಹೆದ್ದಾರಿಯು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಪೂರ್ಣಗೊಂಡಿರುವುದು, ಈ ಬಗ್ಗೆ ಗಡ್ಕರಿಯವರು, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಅನೇಕ ಸಭೆ ನಡೆಸಿರುವುದು, ಶ್ರೀ ಗಡ್ಕರಿಯವರ ಜೊತೆ ನಾನು ಕೂಡಾ ಈ ಕಾಮಗಾರಿಗಳ ಪರಿಶೀಲನೆ ನಡೆಸಿರುವುದು ಇತಿಹಾಸವಾಗಿದೆ.

ಅಷ್ಟೇ ಅಲ್ಲ ಪ್ರಧಾನಿಯವರು 2018ರಲ್ಲಿ ಈ ಯೋಜನೆಯನ್ನು ಘೋಷಿಸಿದಾಗ ಈ ವಿಪಕ್ಷದ ನಾಯಕರಾರೂ ತಾವು ಆ ಕೆಲಸವನ್ನು ಆಗಲೇ ಮಾಡಿದ್ದೇವೆ ಎಂದು ಹೇಳಿರಲಿಲ್ಲವಲ್ಲ. ಈಗ ಈ ಮಹತ್ವಕಾಂಕ್ಷಿ ಯೋಜನೆ ಸಂಪೂರ್ಣ ಫಲ ಬಿಟ್ಟಿರುವಾಗ ಇದನ್ನು ತಾನು ಮಾಡಿದ್ದೇನೆ, ತಮ್ಮ ಪಕ್ಷ ಮಾಡಿದೆ ಎಂದೆಲ್ಲ ಬಿಂಬಿಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

ಮೋದಿಜಿ ಅವರೇ 2018ರಲ್ಲಿ ಘೋಷಿಸಿ ಕೇವಲ ಐದು ವರ್ಷಗಳ ಅವಧಿಯಲ್ಲಿ ಅವರೇ ಈ ಕನಸನ್ನು ನನಸು ಮಾಡಿ ಈಗ ಅವರೇ ಇದನ್ನು ಲೋಕಾರ್ಪಣೆಗೊಳಿಸುವ ಮೂಲಕ ನುಡಿದಂತೆ ನಡೆಯುತ್ತಿರುವ ಸರ್ಕಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆದರೆ ಇದನ್ನು ಸಹಿಸಲಾಗದ ವಿರೋಧ ಪಕ್ಷದವರು ಕೈಲಾಗದವ ಮೈ ಪರಚಿಕೊಂಡ ಎಂಬಂತೆ ಇದರಲ್ಲಿಯೂ ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಿರುವುದು ಅವರ ರಾಜಕೀಯ ವಾಂಛೆಗೆ ನಿದರ್ಶನವಾಗಿದೆ. ತಮಗೆ ಅಧಿಕಾರ ಸಿಕ್ಕಿದ ಕಾಲದಲ್ಲಿ ತೆಪ್ಪಗಿದ್ದ ಈ ವಿರೋಧ ಪಕ್ಷದವರಿಗೆ ಮುಂದಿನ ಚುನಾವಣೆಯ ನಂತರವೂ ತೆಪ್ಪಗಿರುವಂತೆ ಜನರೇ ಪಕ್ಕ ಪಾಠ ಕಲಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button