ರಸಪಂಚಮಿ
ಪ್ರೊ. ಜಿ. ಎಚ್. ಹನ್ನೆರಡುಮಠ
ಜಯನಗರ ಕಾಂಪ್ಲೆಕ್ಸಿನಲ್ಲಿ ಒಂದು ಪಿನ್ನಿನಿಂದ ಹಿಡಿದು ಪ್ಲೇನಿನವರೆಗೂ ಖರೀದಿ ಮಾಡಬಹುದು.
ನಾನು ಈ ಭಯಂಕರ ಕಾಂಪ್ಲೆಕ್ಸಿನಲ್ಲಿ ಇಂದು ಕಿಸೇತುಂಬ ನೋಟುಗಳನ್ನು ತುಂಬಿಕೊಂಡು ಖರೀದಿಗೆ ಹೋದಾಗ ಹೆಂಡತಿಯಿಂದ ನನ್ನ ಮೊಬೈಲಿಗೆ ಆರ್ಡರ್ ಬಂತು-
“ಕೇಳ್ರಿ…. ಖಾಲೀಕೈಲೆ ಬರಬ್ಯಾಡ್ರಿ…. ಯಾಡ್ಡ ಶಿವುಡು ಪುಂಡಿಪಲ್ಲೆ ತೊಗೊಂಡ ಬರ್ರಿ…. ಮರೀಬಾರ‍್ದು….”
ಅಯ್ಯಯ್ಯೋ…. ಪ್ಲೇನ್ ಕೊಳ್ಳಲು ಹೋದ ಮನುಷ್ಯ ಪುಂಡಿಪಲ್ಲೆ ಕೊಳ್ಳಬೇಕಾಯಿತೆ ? ಆದರೂ ಗತ್ಯಂತರ ಇಲ್ಲ. ಪುಂಡಿಪಲ್ಲೆ ಕೊಳ್ಳದಿದ್ದರೆ ಹೆಂಡತಿಯ ಕೈಯಲ್ಲಿ ನಾನು ಚಪ್ಪರಕಾಯಿಚಟ್ನಿ ಆಗುವದಂತೂ ಗ್ಯಾರಂಟಿ !
ಅಂತರ್ರಾಷ್ಟೀಯ ವಿಮಾನಗಳ ಬುಕ್ಕಿಂಗ್ ಆಫೀಸಿಗೆ ಹೋಗಿ ಅಲ್ಲಿಯ ರಿಸೆಪ್ಸನ್ ಕೌಂಟರ್‌ನಲ್ಲಿ ಕುಂತವಳಿಗೆ ಕೇಳಿದೆ-
“ರೀ…. ಇಲ್ಲೆ ಪುಂಡೀಪಲ್ಲೆ ಎಲ್ಲೆ ಸಿಗತೈತ್ರೀ ?”
ಅವಳು ಘಾಬರಾಯಿಸಿ ಕೇಳಿದಳು- “ವಾಟ್ ಪೆಂಟಗಾಂಗ…..?”
ಅವಳ ಪಕ್ಕದ ಅಟೆಂಡರ್ ಕೇಳಿದ-
“ಹಾಗಂದ್ರೇನ್ರೀ….ಅದು ಯಾವ ರಾಷ್ಟ್ರಾ….?”
ನಾನು ಕಂಗಾಲ ಕಾಗಿಯಾದೆ. ಕಾರಣ ; ಇದೇ ಬೆಂಗಳೂರಿನಲ್ಲಿ ಹಿಂದೆ ಒಂದು ಸಲ ಮಾರ್ಕೇಟಿನಲ್ಲಿ ಗಜ್ರಿ ಮಾರಲು ರಸ್ತೆಯಲ್ಲಿ ಹರಕು ಥಟ್ಟು ಹಾಸಿ ಕುಂತ ಹಾಳು ಹಳೇ ಮುದಿಕಿಗೆ ಕೇಳಿದ್ದೆ-
“ಯಮ್ಮಾ…. ಗಜ್ರಿ ಹ್ಯಾಂಗ ಕಿಲೋ ಬೇ….?”
ಆ ಮುದಿಕಿ ಕಣ್ಣು ಕಿಸಿದು ನನ್ನ ಕಡೆ ನೋಡಿ ಕೇಳಿದ್ದಳು- “ಹಾಗಂದ್ರೇನು ?”
ನಾನು ಅವಳ ಬುಟ್ಟಿಯಲ್ಲಿಯ ಗಜ್ರಿ ಕೈಯಿಂದ ಎತ್ತಿ ಹಿಡಿದು ಅವಳಿಗೇ ತೋರಿಸಿ ಹೇಳಿದ್ದೆ-
“ಇದ$ ಬೇ ಇದ$…. ಗಜ್ರಿ….ಗಜ್ರಿ….”
ಅವಳು ಅದಕ್ಕೂ ಕಣ್ಕಿಸಿದು ಹೇಳಿದ್ದಳು-
“ಇದಾ…..? ಇದು ಕ್ಯಾರೆಟ್ಟು……”
ಅದಕ್ಕೆ ನಾನಂದೆ-” ಯಮ್ಮಾ ನೀ ಕರೆಕ್ಟು…. !”
ಬೆಂಗ್ಳೂರಲ್ಲಿ ಕನ್ನಡವನ್ನು ಕೂಡಾ ಇಂಗ್ಲೀಷಿನಲ್ಲೇ ಮಾತಾಡುತ್ತಾರೆ. ಈ ಜನರಿಗೆ “ಬಸವನ ಗುಡಿ ಬೀದಿ” ಅಂದರೆ ಅಪಮಾನ. “ಬುಲ್ ಟೆಂಪಲ್ ರೋಡ್” ಅಂದಾಗಲೇ ಖುಶಿ ! ಕಾರಣ ಬೆಂಗಳೂರಿನ ಇಂಥ ಜಾಣ ಮಹಾನುಭಾವರು ಹಿಂದಿನ ಜನ್ಮದಲ್ಲಿ ಇಂಗ್ಲೆಂಡ ಅರಮನೆಯಲ್ಲೇ….. ರಾಣಿ ಚೇಂಬರಿನಲ್ಲೇ…. ನಾಯಿಕುನ್ನಿ ಆಗಿ ಹುಟ್ಟಿರಲೇಬೇಕು !
ಇಂದು ಜಯನಗರ ಸೂಪರ್ ಮಾರ್ಕೆಟ್ಟಿನಲ್ಲಿ ಒಂದು ಗಂಟೆ ಹುಡುಕುತ್ತ ಹೋಗಿ; ಒಬ್ಬ ತ್ರಿಪುರ ಸುಂದರಿ ತ್ರಿಕೂಟೇಶ್ವರಿ ಹುಡಿಗಿಗೆ ಕೇಳಿದೆ-
“ಬೇ ತಂಗಿ… ಇಲ್ಲೆ ಪುಂಡೀಪಲ್ಲೆ ಎಲ್ಲೆ ಸಿಗತೈತೆಬೆ ?”
ಅವಳು ತೊದಲಿಸಿ ಕೇಳಿದಳು-
“ತೊಂಡಲ ಪಲ್ಲೆ ?”
ನಾನು ಅವಳ ಉಸಾಬರಿ ಬಿಟ್ಟು ಜಯನಗರ ಮಾರ್ಕೆಟ್ಟಿನ ತೊಪ್ಪಲ ಪಲ್ಲೆ ಕಾರ್ನರ್ ಎಕ್ಸಟೆನ್ಶೆನ್‌ಗೆ ಹೋದೆ. ಕಣ್ಣು ಕುಕ್ಕುವಷ್ಟು ತರತರದ ತರಕಾರಿ. ಆದರೆ ಅಲ್ಲಿಲ್ಲ ಪುಂಡಿಪಲ್ಲೆ ! ಪುಂಡಿಪಲ್ಲೆ ಇಲ್ಲದಿದ್ದರೆ ಮೂಗುತಿ ಇಲ್ಲದ ಮಾನಿನಿಯಂತೆ !
ನಮ್ಮ ಧಾರವಾಡ-ಹುಬ್ಬಳ್ಳಿ- ಬಿಜಾಪುರಗಳಲ್ಲಿ ರೊಟ್ಟಿ-ಪುಂಡಿಪಲ್ಲೆ ಏಕ್ದಂ ಏವನ್ ಊಟ. ಪಾರ್ವತಿದೇವಿ ಕೂಡ ಕೈಲಾಸದಿಂದ ಕದ್ದು ನಮ್ಮ ಹೊಲಕ್ಕೆ ತುಡಿಗಿನಿಂದ ಬಂದು ರೊಟ್ಟಿ-ಎಣಗಾಯಿ-ಪುಂಡಿಪಲ್ಲೆ- ಅಗಸಿ ಹಿಂಡಿ- ಹುಂಚಿಕಾಯಿ ಟಕ್ಕು- ಕರಿಂಡಿ- ಕುಸಿಬಿಯಣ್ಣಿ- ಹಸೇ ಉಳ್ಳಾಗಡ್ಡಿ – ಎಳೇ ಸವುತಿ ಕಾಯಿ-ಗುರೆಳ್ಳ ಹಿಂಡಿ ಗಡದ್ದಾಗಿ ಉಂಡು ಹೋಗುತ್ತಿದ್ದಳು. ಮಣ್ಣಿನ ಮಕ್ಕಳ ಸುಖ ಬಲ್ಲ ಮಾನಿನಿ ಪಾರೋತಿ ಮಾತ್ರ. ಲಕ್ಷ್ಮಿಗೆ ಈ ಭಾಗ್ಯ ಇಲ್ಲ. ಅವಳು ಸಾವುಕಾರರ ಮನೆಯ ಸಿರಾ-ಪುರಿ ಪ್ರಿಯೆ. ಸರಸ್ವತಿಯಂತೂ ಪೀಯಚ್ಡಿ ಹೋಲ್ಡರುಗಳ ಪೇಡೆ ಪ್ರಿಯೆ ಮಾತ್ರ. ಈ ಇಬ್ಬರಿಗೆ ಬೆಂಗಳೂರಿನ ಫುಡ್ ಪೆರಲಾರುಗಳೇ ಪಸಂದು !
ಈ ಸೂಪರ್ ಮಾರ್ಕೆಟಿನಲ್ಲಿ ಸೋತು ಸುಸ್ತಾಗಿ ಹೋದೆ. ಕೊನೆಗೆ ನನ್ನ ಕಷ್ಟ ಕಾಣಲಾರದೇ ಒಬ್ಬಳು ನನಗೆ ಉಪಕಾರ ಮಾಡುವಂತೆ ಒಂದು ಹುಳ ಹತ್ತಿದ ಹರಕು ಪುಂಡಿಪಲ್ಲೆ ಶಿವುಡು ತೋರಿಸಿ…. ” ಇದಾ ಗುಂಗೂರು ಸೊಪ್ಪು?” ಅಂದಳು. ನನಗೆ ಆ ಕ್ಷಣದಲ್ಲಿ ಆ ಗುಂಗೂರೇ ಗೋಳುಗುಮ್ಮಟ ಆತು!
ಒಂದರ್ಥದಲ್ಲಿ ಈ ಗುಂಗೂರು ಸೊಪ್ಪು ಪುಂಡೀಪಲ್ಲೆಯ ಹೋಲಿಕೆಯ ಒಂದು ಥರಾ ಭೂತ ಬೇತಾಳ! ಅರ್ಧಮರ್ದ ಕೊಳೆತು ಹುಳತಿಂದ ಆ ತೊಪ್ಪಲಕ್ಕೆ ಅವಳು ಶಿವುಡಿಗೆ ಇಪ್ಪತ್ತು ರೂಪಾಯಿ ಹೇಳಿದಳು. ಮನೆಯ ಭೂತಭಾಮಿನಿಗೆ ಅಂಜಿ ಸುಮ್ಮನೇ ಖರೀದಿಸಿದೆ.
ನಮ್ಮ ವಿಜಾಪೂರ ಜಿಲ್ಲೆ ಬಯಲು ಸೀಮೆಯ ಹಳ್ಳಿಗಳಲ್ಲಿ ಇಂಥ ನೂರಾರು ತರಕಾರಿಗಳು ಬಿಸಿಲುಂಡು ರುಚಿತುಂಬಿ ಬೆಳೆಯುತ್ತವೆ. ಗಜ್ರಿ- ಮೂಲಂಗಿ- ಉಳ್ಳಾಗಡ್ಡಿ- ಹೀರೀಕಾಯಿ- ಸವತೀಕಾಯಿ- ಬೆಂಡಿ- ಚವಳಿ- ಪುಂಡಿ- ಮೆಣಸಿನಕಾಯಿ- ಮೆಕ್ಕಿಕಾಯಿ- ಕಾರ್ಚಿ ಕಾಯಿ- ಕಲ್ಸಬ್ಬಸಗಿ- ಅಮ್ರಿ ಚಟ್ಟಿ- ಕುಸಬಿ ಪಲ್ಲೆ- ಕಡ್ಲಿ ಪಲ್ಲೆ- ಗೋಳಿ ಪಲ್ಲೆ- ಹನ್ನಿ- ಹಕ್ಕರಕಿ…. ಇಂಥ ಬಿಸಿಲ ಭೂಮಿಯ ಕನ್ನೆಯರು ಹುಚ್ಚೆಬ್ಬಿಸುವಷ್ಟು ರಸವಂತಿಯರು.
ದೇಶೀ ಹುಡಿಗಿಯರು ಕೊಡುವ ಜೀವನ ಸುಖವನ್ನು ಫಾಸ್ಟ ಫುಡ್ಡಿನ ಮೇಕಪ್ ಬೆಡಗಿಯರು ಎಂದೂ ಕೊಡಲಾರರು. ಅವರ ಮೇಕಪ್ಪು ಎಷ್ಟಿದ್ದರೂ ಡಾಕ್ಟರ ಕೈಯಲ್ಲಿ ಚಕಪ್ಪು !
ಅಬ್ಬಬ್ಬಾ…. ಮಹಾನಗರಗಳ ಮಹಾಚರಂಡಿಗಳಲ್ಲಿ ಬೆಳೆದ ಮಹಾ ತರಕಾರಿಗಳನ್ನು ಫಾಯಿವ್‌ಸ್ಟಾರ್ ಹೊಟೆಲುಗಳಲ್ಲಿ ಭುಂಜಿಸುವ ಮಹಾನುಭಾವರ ಭಾಗ್ಯವೇ ಭಾಗ್ಯ!…. ಧನ್ಯ ಧನ್ಯ…..
ಆ ಪುಂಡಿ ಪಲ್ಲೆ ಮನೆಗೆ ಹೊತ್ತೊಯ್ಯಲು ಆಟೊ ಮಾಡಿಕೊಂಡು ಮನೆ ಸೇರಿದಾಗ…. ಹೆಂಡತಿ ಹುಳತಿಂದ ಅದನ್ನು ಹುಳುಹುಳು ಹುಳ್ಳಾಡಿಸಿ ನೋಡಿದಳು. ನಾನು ಅವಳಿಗೆ ಕೇಳಿದೆ-
“ಯಾಕ….. ಪುಂಡಿಪಲ್ಲೆ ಚೊಲೊ ಇಲ್ಲಾ….?”
ಅವಳೆಂದಳು-
“ಚೊಲೊ ಐತಿ…. ನಿಮ್ಮ ಮಸಡಿ ಥರಾ ! ”
(ಲೇಖಕರು ಖ್ಯಾತ ಸಾಹಿತಿ. ಲೇಖನದ ಕುರಿತು ಅವರಿಗೆ ನಿಮ್ಮ ಅಭಿಪ್ರಾಯ ತಿಳಿಸಲು ಮೊಬೈಲ್ -9945701108)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ