*ಒಳ ಮಿಸಲಾತಿಗೆ ಬಂಜಾರ ಸಮಾಜ ವಿರೋಧ: ಸರ್ಕಾರದ ವಿರುದ್ಧ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪರಿಶಿಷ್ಟ ಜಾತಿ (SC) ಒಳ ಮೀಸಲಾತಿ ನಿರ್ಧಾರವನ್ನು ವಿರೋಧಿಸಿ, ಬೆಳಗಾವಿಯಲ್ಲಿ ಬಂಜಾರ ಸಮಾಜದ ವತಿಯಿಂದ ಇಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಒಳ ಮೀಸಲಾತಿ ಜಾರಿಯಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸರ್ಕಾರ ತಕ್ಷಣವೇ ತನ್ನ ಆದೇಶವನ್ನು ಹಿಂಪಡೆದು, ಪುನರ್ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಲೋಕ ಸಭಾ ಸದಸ್ಯರಾದ ಉಮೇಶ್ ಜಾಧವ್ ಅವರು, ನಾಗಮೋಹನ ದಾಸ್ ವರದಿ ಜಾರಿಗೆ ಬಂದಿದೆ ಆದರೆ ಸರ್ಕಾರ ಈ ವರದಿಯನ್ನು ಸಂಪೂರ್ಣವಾಗಿ ಹಿಂಬಾಲಿಸಿಲ್ಲ ಈ ವರದಿಯಲ್ಲಿ ಬಹಳಷ್ಟು ಗೊಂದಲಗಳಿವೆ ಅದರಲ್ಲಿ ಸ್ಪರ್ಷರು ಮತ್ತು ಅಸ್ಪೃಶ್ಯರು ಅಂತ ಮಾಡಿದಾಗ ಸರಿಯಾಗಿ ಗಣತಿಯಲ್ಲಿ ತೆಗೆದುಕೊಂಡಿಲ್ಲ ಇದನ್ನು ಸರಿಪಡಿಸಿ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ಇದು ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಡ್ತಾ ಇದೀವಿ ಎಂದು ಹೇಳಿದರು
ಬಳಿಕ ಮಾತನಾಡಿದ ಚಿತ್ರದುರ್ಗ ಬಂಜಾರ ಪೀಠದ ಸರ್ದಾರ್ ಸ್ವಾಮೀಜಿ, “ಬಂಜಾರ ಸಮಾಜ ಇಂದಿಗೂ ಸ್ವಂತ ಭೂಮಿ ಮತ್ತು ಹಕ್ಕಿನ ಉದ್ಯೋಗದಿಂದ ವಂಚಿತವಾಗಿದೆ. ಸಿದ್ದರಾಮಯ್ಯ ಸರ್ಕಾರ ಯಾರೋ ಕೆಲವರ ಒತ್ತಡಕ್ಕೆ ಮಣಿದು ನಮಗೆ ಅನ್ಯಾಯ ಮಾಡುತ್ತಿದೆ. ಈ ಸಮಾಜಕ್ಕೆ ಅನ್ಯಾಯ ಮಾಡಿದವರು ಯಾರೂ ಅಧಿಕಾರದಲ್ಲಿ ಉಳಿದಿಲ್ಲ ಎಂಬುದು ನೆನಪಿರಲಿ. ಕೇವಲ ಎ, ಬಿ, ಸಿ, ಡಿ ಗುಂಪುಗಳನ್ನು ಮಾಡಿ ನೀಡಿರುವ ಮೀಸಲಾತಿ ನಮಗೆ ಒಪ್ಪಿಗೆಯಿಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮ ತಾಂಡಾಗಳಿಗೆ ಬಂದಾಗ ಸಮಾಜ ತನ್ನ ತಾಕತ್ತು ಏನೆಂಬುದನ್ನು ತೋರಿಸಲಿದೆ” ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಸಮಾಜದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಬರಬೇಕೆಂದು ಕರೆ ನೀಡಿದರು.



