
ಪ್ರಗತಿವಾಹಿನಿ ಸುದ್ದಿ: ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಬ್ಯಾಂಕ್ ಆಫ್ ಬರೋಡಾ ತನ್ನ ವಿವಿಧ ಶಾಖೆಗಳು ಮತ್ತು ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.
ನಿಯಮಿತ ಹಾಗೂ ಒಪ್ಪಂದದ ಆಧಾರದ ಮೇಲೆ ಹಿರಿಯ ವ್ಯವಸ್ಥಾಪಕ, ಉಪ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಮತ್ತು ಸಹಾಯಕ ಉಪಾಧ್ಯಕ್ಷ ಸೇರಿದಂತೆ ಒಟ್ಟು 419 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ ಪದವಿ ಅಥವಾ MBA, PGDM, CA, CFA, CMA ಮುಂತಾದ ವೃತ್ತಿಪರ ಅರ್ಹತೆಗಳನ್ನು ಹೊಂದಿರಬೇಕು. ಜೊತೆಗೆ, ಅಧಿಸೂಚನೆಯಲ್ಲಿ ಸೂಚಿಸಿದಂತೆ ಸಂಬಂಧಿತ ಕ್ಷೇತ್ರದಲ್ಲಿ ಅನುಭವವೂ ಅಗತ್ಯವಾಗಿದೆ.
ಹುದ್ದೆಗಳ ಪ್ರಕಾರ ವಯೋಮಿತಿ 22 ರಿಂದ 40 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಸರಕಾರದ ನಿಯಮಗಳಂತೆ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಪಿಎಚ್‌ಡಿ ಪಡೆದವರಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಸಕ್ತರು ಫೆಬ್ರವರಿ 6 ರಿಂದ ಫೆಬ್ರವರಿ 26ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು . ಅರ್ಜಿ ಶುಲ್ಕವಾಗಿ ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ರೂ. 850 ಪಾವತಿಸಬೇಕಾಗಿದ್ದು, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ, ಇಎಸ್‌ಎಂ, ಡಿಇಎಸ್‌ಎಂ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ. 175 ಮಾತ್ರ ನಿಗದಿಯಾಗಿದೆ. ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರದೆ, ಅಭ್ಯರ್ಥಿಗಳ ಆಯ್ಕೆ ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು
https://bankofbaroda.bank.in/career/current-opportunities


