Politics

*ಸ್ವಾತಿ ಹತ್ಯೆ ಹಿಂದೆ ಲವ್ ಜಿಹಾದ್ ಜಾಲ ಸಕ್ರೀಯ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಎಂಬ ಯುವತಿಯನ್ನು ವಂಚಿಸಿ ಹತ್ಯೆ ಮಾಡಿರುವ ಘಟನೆ ಖಂಡನೀಯವಾಗಿದ್ದು, ರಾಜ್ಯದಲ್ಲಿ ಪ್ರೀತಿಯ ಹೆಸರಿನಲ್ಲಿ ಲವ್ ಜಿಹಾದ್ ಜಾಲ ಸಕ್ರೀಯವಾಗಿದ್ದು ಪೊಲೀಸರ ಭಯ ಇಲ್ಲದಿರುವುದೇ ಇಂತ ಪ್ರಕರಣ ಹೆಚ್ಚಾಗಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಮಾಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ವಿಶೇಷವಾಗಿ ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ಹತ್ಯೆ ಮಾಡುವ ಹೇಯ ಕೃತ್ಯಗಳು ಹೆಚ್ಚಾಗಿರುವುದು ಅತ್ಯಂತ ಆಘಾತಕಾರಿ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ನೇಹಾ ಹಿರೇಮಠ ಅವಳ ಬರ್ಬರ ಕೊಲೆಯ ನೋವು ಮಾಸುವ ಮುನ್ನ ಈಗ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಎನ್ನುವ ಯುವತಿಯ ಕೊಲೆಯಾಗಿದ್ದು, ಇದೂ ಕೂಡ ಲವ್ ಜಿಹಾದ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Home add -Advt

ಈ ಘಟನೆ ನಡೆದು ಒಂದು ವಾರ ಕಳೆದರೂ ಈ ಪ್ರಕರಣದಲ್ಲಿ ಬಂಧಿತನಾಗಿರುವ ನಯಾಜ್ ಎನ್ನುವ ಪ್ರಮುಖ ಆರೋಪಿಯ ರಕ್ಷಣೆಗೆ ದೊಡ್ಡ ಮಟ್ಟದ ಕಸರತ್ತು ನಡೆದಂತೆ ಕಾಣಿಸುತ್ತದೆ. ಸ್ವಾತಿಯನ್ನು ಪ್ರೀತಿಸುವ ನಾಟಕವಾಡಿ ಅನ್ಯ ಧರ್ಮದವಳೆಂದು ತಿರಸ್ಕರಿಸಿ ತನ್ನ ಧರ್ಮದ ಬೇರೆ ಯುವತಿಯ ಜೊತೆ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದನ್ನು ಪ್ರಶ್ನಿಸಿರುವುದಕ್ಕೆ ಸ್ವಾತಿಯ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಇದೆ.

ಇತ್ತೀಚಿನ ದಿನಗಳಲ್ಲಿ ಪ್ರೀತಿಯ ಹೆಸರಿನಲ್ಲಿ ಲವ್ ಜಿಹಾದ್ ಜಾಲ ರಾಜ್ಯದಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಕೃತ್ಯ ನಡೆಸುವವರಿಗೆ ಪೊಲೀಸರ ಭಯ ಇಲ್ಲದಿರುವುದು ಇಂತಹ ಪ್ರಕರಣ ಹೆಚ್ಚಾಗಲು ಕಾರಣ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವುದರಿಂದ ಮಾತ್ರ ಇಂತಹ ಪ್ರಕರಣಗಳಿಗೆ ತಡೆ ಒಡ್ಡಬಹುದಾಗಿದೆ. ಇದರ ಬಗ್ಗೆ ಪೊಲೀಸರು ನಿಷ್ಠುರವಾಗಿ ಅಪರಾಧಿಗಳನ್ನು ಹಿಡಿದು ಅದರ ಹಿಂದೆ ಇರುವ ಶಕ್ತಿಗಳನ್ನು ಕಡಿವಾಣ ಹಾಕುವುದು ಅತ್ಯಂತ ಅವಶ್ಯ. ಆದರೆ, ಇಂತಹ ಪ್ರಕರಣಗಳು ಕೆಲವೇ ದಿನಗಳಲ್ಲಿ ಅಧಿಕಾರಿಗಳು ಗಾಂಭಿರ್ಯತೆಯಿಂದ ತೆಗೆದುಕೊಳ್ಳದೇ ಮರೆತು ಹೋಗುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.

ಹೆಣ್ಣು ಮಕ್ಕಳ ಕುಟುಂಬ, ಬಂಧುಗಳು ಮತ್ತು ಸಮಾಜ ಅತ್ಯಂತ ನೋವು ಪಡುವ ಈ ಘಟನೆಯಲ್ಲಿ ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಮತ್ತು ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Related Articles

Back to top button