Karnataka NewsLatestPolitics

*ರಾಜ್ಯದಲ್ಲಿರುವುದು ಎಡವಟ್ಟು ಮತ್ತು ಅಡಮುಟ್ ಸರ್ಕಾರ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಬಳ್ಳಾರಿ: ರಾಜ್ಯದಲ್ಲಿ ಎಡವಟ್ಟು ಮತ್ತು ಅಡಮುಟ್ ಸರ್ಕಾರ ಇದೆ. ಯಾಕೆಂದರೆ ಹೆಜ್ಜೆ ಹೆಜ್ಜೆಗೂ ಎಡವಟ್ಟು ಮಾಡುತ್ತಾರೆ. ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿರುವುದರಿಂದ ಅಡಮುಟ್ ಸರ್ಕಾರ, ಕರ್ನಾಟಕದ ಜನತೆಯ ಯೋಗ್ಯತೆಗೆ ತಕ್ಕಂತೆ ಈ ಸರ್ಕಾರ ಇಲ್ಲಾ. ಇದು ಅತ್ಯಂತ ಕಡು ಭ್ರಷ್ಟ ಸರ್ಕಾರ, ಈ ಸರ್ಕಾರ ಕಿತ್ತು ಹಾಕಲು ಬಳ್ಳಾರಿ ಪಾದಯಾತ್ರೆ ನಮಗೆ ಸ್ಫೂರ್ತಿ ನೀಡಿದೆ. ಇನ್ನೊಂದು ಹೋರಾಟ ಮಾಡಲು ನಾವು ಸನ್ನದ್ದರಾಗಿದ್ದೇವೆ. ಇದೇ ನಮ್ಮ ಸಂಕಲ್ಪ, ಇದೇ ನಮ್ಮ ಪ್ರತಿಜ್ಞೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಹಮ್ಮಿಕೊಂಡಿದ್ದ 10 ದಿನಗಳ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಕೌಂಟ್ ಡೌನ್ ಶುರುವಾಗಿದೆ. ಅವರು ನೂರು ದಿನ ಆಚರಣೆ ಮಾಡುತ್ತಿದ್ದಾರೆ. ಇನ್ನು ಮುಂದೆ ಅವರದು ಉಲ್ಫಾ ಎಣಿಕೆ ಶುರುವಾಗುತ್ತದೆ. ಈಗಾಗಲೇ ನೂರು ದಿನ ಏನು ಮಾಡಿದ್ದಾರೆ. ಅದನ್ನು ನೋಡಿದಾಗ ಇದೊಂದು ಎಡವಟ್ಟು ಮತ್ತು ಅಡಮುಟ್ ಸರ್ಕಾರ. ಯಾಕೆಂದರೆ ಹೆಜ್ಜೆ ಹೆಜ್ಜೆಗೂ ಎಡವಟ್ ಮಾಡುತ್ತಾರೆ. ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಾರೆ. ಅದಕ್ಕೆ ಅಡಮುಟ್ ಸರ್ಕಾರ, ಕರ್ನಾಟಕದ ಜನತೆಯ ಯೋಗ್ಯತೆಯ ತಕ್ಕಂತೆ ಈ ಸರ್ಕಾರ ಇಲ್ಲಾ. ಇದು ಅತ್ಯಂತ ಕಡು ಭ್ರಷ್ಟ ಸರ್ಕಾರ, ಅವರಿಗೆ ಇಲಾಖೆಯಲ್ಲಿನ ಹಣ ತಿನ್ನಲು ಸಾಲುತ್ತಿಲ್ಲ. ಹೀಗಾಗಿ ಜನರಿಂದ ಅರ್ಜಿ ಪಡೆಯುತ್ತಿದ್ದಾರೆ. ಪ್ರಜಾ ಸೇವೆ ಹೆಸರಿನಲ್ಲಿ ಜನರಿಂದ ನೇರವಾಗಿ ಲಂಚ ಪಡೆಯುತ್ತಿದ್ದಾರೆ ಅದಕ್ಕಾಗಿ ಇದು ಕೌಂಟ್ ಡೌನ್ ಸರ್ಕಾರ ಎಂದು ಹೇಳಿದರು.

Home add -Advt

ಕಾಂಗ್ರೆಸ್‌ನಿಂದ ಮೀಸಲಾತಿ ಕಡಿತ
ನಾವು ಎಸ್ಸಿ ಎಸ್ಪಿ ಮೀಸಲಾತಿ ಹೆಚ್ಚಳ ಮಾಡಿದೆವು. ಎಸ್ಟಿ ಮೀಸಲಾತಿಯನ್ನು ಶೇ 15 ರಿಂದ ಶೇ 17, ಎಸ್ಪಿ ಮೀಸಲಾತಿಯನ್ನು ಶೇ 3 ರಿಂದ ಶೇ 7ಕ್ಕೆ ಹೆಚ್ಚಳ ಮಾಡಿದ್ದೇವು. ಅದರ ಹಿಂದೆ ಸಾಮಾಜಿಕ ಸ್ಥಿತಿಗತಿಯ ಪರಿಸ್ಥಿತಿ ಅರಿತು, ಸಮಾಜದಲ್ಲಿ ಎಸ್ಸಿ ಎಸ್ಟಿ ಜನಾಂಗವೂ ಕೂಡ ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಆಗಬೇಕೆಂದು ಮಾಡಿದೆವು. ಆದರೆ, ಕಾಂಗ್ರೆಸ್ ಸರ್ಕಾರ ಮತ್ತೆ ಎಸ್ಸಿ ಮೀಸಲಾತಿ ಶೇ 15 ಮತ್ತು ಎಸ್ಪಿ ಮೀಸಲಾತಿ ಶೇ 3 ಕ್ಕೆ ಇಳಿಸಿದರು. ಮೀಸಲಾತಿ ಹೆಚ್ಚಳದಿಂದ ಪ್ರತಿ ವರ್ಷ ಎಸ್ಸಿ ವಿದ್ಯಾರ್ಥಿಗಳಿಗೆ ನಾಲ್ಕು ನೂರು ಎಸ್ಪಿ ವಿದ್ಯಾರ್ಥಿಗಳಿಗೆ 200 ಎಂಬಿಬಿಎಸ್ ಸೀಟು ಸಿಗುತ್ತಿತ್ತು. 2 ಸಾವಿರ ಎಂಜನೀಯರಿಂಗ್ ಸೀಟು ಸಿಗುತ್ತಿತ್ತು. ಅದನ್ನು ತೆಗೆದು ಹಾಕಿರುವುದರಿಂದ ಎಸ್ಸಿ ಎಸ್ಪಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನಾಗೇಂದ ರಾಜೀನಾಮೆ ಕೊಟ್ಟರೆ ದಲಿತರಿಗೆ ಅನ್ಯಾಯವಾಗಿದೆ ಅಂತ ಹೇಳುತ್ತಾರೆ. ಆದರೆ, ದಲಿತ ಮಕ್ಕಳಿಗೆ ಸಿಗುವ ಮೀಸಲಾತಿ ಕಸಿದುಕೊಂಡು ಅವರಿಗೆ ಅನ್ಯಾಯ ಮಾಡಿದ್ದೀರಿ. ನಿಜವಾಗಿ ದಲಿತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು.

ಅಹಿಂದ ಲಾಭ ಸಿದ್ದರಾಮಯ್ಯಗೆ
ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಅಂತ ಹೇಳುತ್ತಾರೆ. ಕರ್ನಾಟಕದಲ್ಲಿ ಅಹಿಂದದಿಂದ ಲಾಭ ಸಿಕ್ಕಿರುವುದು ಸಿದ್ದರಾಮಯ್ಯ ಅವರಿಗೆ ಮಾತ್ರ ಅಹಿಂದಕ್ಕೆ ಏನು ಮಾಡಿದ್ದೀರಿ, ಎಸ್ಸಿ ಎಸ್ಪಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರೆಂಟಿಗೆ ಬಳಕೆ ಮಾಡುತ್ತೀರಿ ನಾಚಿಕೆ ಆಗುವುದಿಲ್ಲವೇ ನಿಮಗೆ ಎಂದು ಆಕ್ರೋಶ ಹೊರ ಹಾಕಿದರು. ರೈತರ ಭವಿಷ್ಯ ಬರೆಯುವ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಡಿಪಿಆರ್ ಮಾಡಲು 20 ಕೋಟಿ ರೂ. ಕೊಟ್ಟರು. ನಾನು ಬಜೆಟ್‌ನಲ್ಲಿ 1 ಸಾವಿರ ಕೋಟಿ ಮೀಸಲಿಟ್ಟಿದ್ದೆ. ಇವರು ಅದನ್ನು ಕೈ ಬಿಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ವಿರೋಧಿ ಸರ್ಕಾರ ಇದೆ. ನಾನು 5 ಸಾವಿರ ಕೋಟಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇಟ್ಟಿದ್ದೆ. ಸಿದ್ದರಾಮಯ್ಯ 2 ಸಾವಿರ ಕೋಟಿ ಖರ್ಚು ಮಾಡಲಿಲ್ಲ. ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಮಾಡಬೇಕೆಂದು 50 ಕೋಟಿ ಮೀಸಲಿಟ್ಟಿದ್ದೆ ಅದನ್ನು ಬಳಕೆ ಮಾಡಿಲ್ಲ. ಬಳ್ಳಾರಿ ಏರ್‌ಪೋರ್ಟ್‌ಗೆ 40 ಕೋಟಿ ಇಟ್ಟಿದ್ದೆ. ಅದು ಮಂಗಮಾಯವಾಗಿದೆ. ಬಳ್ಳಾರಿ ವಿರೋಧಿ, ರೈತರ ವಿರೋಧಿ, ದಲಿತರ ವಿರೋಧಿ ಸರ್ಕಾರ ಇದೆ ಎಂದು ಆರೋಪಿಸಿದರು.

ನಾವು ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಟ್ಟೆವು ಅದನ್ನು ತೆಗೆದು ಹಾಕಿದರು ಯಡಿಯೂರಪ್ಪ ಕಿಸಾನ್ ಸಮ್ಮಾನ್‌ಗೆ ಕೊಡುವ 4 ಸಾವಿರ ರೂ ತೆಗೆದು ಹಾಕಿದರು ರಾಜ್ಯದಲ್ಲಿ ರೈತರಿಗೆ ಮಾರಕವಾಗಿರುವ ಸರ್ಕಾರ ಇದೆ. ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಹಾಗೂ ರಾಜ್ಯದ ಯೋಜನೆಗಳನ್ನು ಮರು ಪ್ಯಾಕೇಜ್ ಮಾಡಿ ಕೊಡುತ್ತಿದ್ದಾರೆ. ಭಾರತ್ ಜೋಡೊ ಸಂಘಗಳಿಗೆ ಮುನ್ಸಿಪಲ್ ಹಣ ಕೊಡುತ್ತಿದ್ದಾರೆ. ಅದಕ್ಕೆ ಪರ್ಯಾಯವಾಗಿ ಬಿಜೆಪಿ ಯುವ ಮೋರ್ಚಾ 1ಲಕ್ಷ ಸಂಘ ಕಟ್ಟುವ ಸಂಕಲ್ಪ ಮಾಡಬೇಕು. ಎಸ್ತಿ ಎಸ್ಪಿ ಸಮುದಾಯದ ನಾಯಕರು ಎಸ್ಸಿ ಮೀಸಲಾತಿ ಶೇ 17, ಎಸ್ಸಿ ಮೀಸಲಾತಿ ಶೇ 7 ಆಗುವವರೆಗೂ ಎಲ್ಲ ಗ್ರಾಮಗಳಿಗೆ ಹೋಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಜನಾಕ್ರೋಶ ತುಂಬಿದೆ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹತ್ತು ದಿನ ಪಾದಯಾತ್ರೆ ಮಾಡಿದರು. ಜನರ ನಾಡಿ ಮಿಡಿತ ಏನಿದೆ ಅನ್ನುವುದು ಗೊತ್ತಾಗಿದೆ. ಅವರು ಹೋದಲ್ಲಿ ಜನರು ತೋರಿರುವ ಪ್ರೀತಿ ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಡೀ ರಾಜ್ಯದಲ್ಲಿ ಈ ಸರ್ಕಾರದ ವಿರುದ್ಧ ಆಕ್ರೋಶ ತುಂಬಿಕೊಂಡಿದೆ. ಜನರ ಆಕ್ರೋಶಕ್ಕೆ ನಾವು ಧ್ವನಿಯಾಗಬೇಕು. ವಿರೋಧ ಪಕ್ಷದಲ್ಲಿದ್ದಾಗ ನಾವು ಯಾವುದಕ್ಕಾಗಿ ಹೋರಾಟ ಮಾಡಿದ್ದೇವೊ ಅಧಿಕಾರಕ್ಕೆ ಬಂದಾಗ ಆ ಕೆಲಸಗಳನ್ನು ಮಾಡುವ ಸಂಕಲ್ಪ ಮಾಡಬೇಕು. ಇದೇ ಬಿಜೆಪಿಗೂ ಬೇರೆ ಪಕ್ಷಕ್ಕೂ ಇರುವ ವ್ಯತ್ಯಾಸ, ಜನಾರ್ದನ ರೆಡ್ಡಿ ಹಾಗೂ ರಾಮುಲು ಅವರು ನಾಗೇಂದನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಅವನು ಬೂತಕಾಲದಲ್ಲಿದ್ದಾನೆ. ಭವಿಷ್ಯ ನಿಮ್ಮ ಮುಂದೆ ಇದೆ. ನೀವು ಕಂಡಿರುವ ಬಳ್ಳಾರಿ ಅಭಿವೃದ್ಧಿಯ ಕನಸು ನನಸು ಮಾಡಲು ಹೋರಾಟ ಮಾಡಿ, ರಾಮುಲು ಕೇವಲ ಬಳ್ಳಾರಿಯ ಹುಲಿ ಅಲ್ಲ, ಇಡೀ ಕರ್ನಾಟಕದ ಹುಲಿ, ನಿಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಮೀಸಲಾತಿ ಕಡಿಮೆ ಮಾಡಿದ್ದಾರೆ. ಅದರ ವಿರುದ್ಧ ಹೋರಾಟ ಮಾಡಿ ಅದು ಹೇಗೆ ಬರುವುದಿಲ್ಲವೋ ನೋಡೋಣ. ದೇವರು ಪಯತ್ನಕ್ಕೆ ಫಲ ಕೊಟ್ಟೆ ಕೊಡುತ್ತಾನೆ ಎಂದು ಹೇಳಿದರು.

ಅಶೋಕ್, ಛಲವಾದಿ ಕಾರ್ಯ ಶ್ಲಾಘನೆ
ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಅತ್ಯಂತ ಯಶಸ್ವಿಯಾಗಿ ಹೋರಾಟ ಮಾಡಿದ್ದರಿಂದ ಸಿಎಂ ಡಿ.ಕೆ. ಶಿವಕುಮಾರ್ ಅಧಿವೇಶನ ಮೊಟಕುಗೊಳಿಸಿ ಓಡಿ ಹೋದರು. ಅಶೋಕ್ ಅವರು ಅಹೋ ರಾತ್ರಿ ಹೋರಾಟ ಮಾಡುತ್ತೇನೆ ಎಂದ ಕೂಡಲೇ ಸಿಎಂ ಭಯ ಬಿದ್ದರು. ಇನ್ನು ಕಾಂಗ್ರೆಸ್ ಸರ್ಕಾರಕ್ಕೆ ಉಳಿಗಾಲವಿಲ್ಲ. ಅಧಿಕಾರಿಗಳು ಟಾನ್ಸ್‌ಫ‌ರ್ ಆಸೆಗೆ ಕಾನೂನು ವಿರುದ್ಧ ಮಾಡಿದರೆ ಮುಂದಿನ ದಿನಗಳಲ್ಲಿ ನಿಮಗೆ ಕಷ್ಟದ ದಿನಗಳು ಬರುತ್ತವೆ. ಅವರು ಮನೆಗೆ ಹೋಗುತ್ತಾರೆ. ನಾವು ಅಧಿಕಾರಕ್ಕೆ ಬರುತ್ತೇವೆ. ತೀರ್ಮಾನ ನಿಮ್ಮದು ಎಲ್ಲವನ್ನು ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಕೆ ನೀಡಿದರು. ವಿಜಯೇಂದ್ರ ಪಾದಯಾತ್ರೆಯಲ್ಲಿ ಬಿಸಿಲು ಎದುರಿಸಿದ್ದಾರೆ. ಪ್ರಸಂಗ ಬಂದರೆ ಮಳೆ, ಬಿರುಗಾಳಿಯನ್ನೂ ಎದುರಿಸಲು ಸಿದ್ಧ. ಈ ಎಡವಟ್ಟು ಅಡಮುಟ್ಟ ಸರ್ಕಾರ ಕಿತ್ತು ಹಾಕಲು ಬಳ್ಳಾರಿ ಯಾತ್ರೆ ನಮಗೆ ಸ್ಪೂರ್ತಿ, ಇನ್ನೊಂದು ಹೋರಾಟ ಮಾಡಲು ನಾವು ಸನ್ನದ್ದರಾಗಿದ್ದೇವೆ ಇದೇ ನಮ್ಮ ಸಂಕಲ್ಪ, ಇದೇ ನಮ್ಮ ಪ್ರತಿಜ್ಞೆ ಎಂದು ಹೇಳಿದರು.

Related Articles

Back to top button