Karnataka NewsLatestPolitics

*ಸಾಧನೆಯ ಖಾತೆ ಖಾಲಿ – ಸಂಭ್ರಮದ ಖರ್ಚು ಭಾರಿ: ಯಾವ ಪುರುಷಾರ್ಥಕ್ಕೆ ಈ ಸಡಗರ-ಸಂಭ್ರಮ?*

ಡಿ.ಕೆ.ಶಿವಕುಮಾರ್ ಸರ್ಕಾರದ 100 ದಿನದ ಸಂಭ್ರಮಕ್ಕೆ ಆರ್.ಅಶೋಕ್ ವ್ಯಂಗ್ಯ

ಪ್ರಗತಿವಾಹಿನಿ ಸುದ್ದಿ: ಸಾಧನೆಯ ಖಾತೆ ಖಾಲಿ – ಸಂಭ್ರಮದ ಖರ್ಚು ಭಾರಿ! ಎಂದು ಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರದ 100 ದಿನಗಳ ಸಂಭ್ರಮದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

Home add -Advt

ಯಾವ ಸಾಧನೆಗೆ ಈ ಸಂಭ್ರಮ? ಯಾವ ಸಾಧನೆಗೆ ಈ ಸಡಗರ? ನಾಚಿಕೆಯಾಗಬೇಕು, ಸಿಎಂ ಡಿ.ಕೆ. ಶಿವಕುಮಾರ್ ಅವರೇ! ಆದರೆ ನಿಮ್ಮ ಭಂಡತನವನ್ನ ಮಾತ್ರ ಮೆಚ್ಚಲೇಬೇಕು!

100 ದಿನಗಳ ಆಡಳಿತಕ್ಕೆ ಬ್ಯಾಂಕ್ವೆಟ್ ಹಾಲ್, ಭರ್ಜರಿ ವೇದಿಕೆ, ವಿದ್ಯುತ್ ದೀಪಾಲಂಕಾರ, ಕೋಟ್ಯಂತರ ರೂಪಾಯಿಗಳ ಪ್ರಚಾರ – ಇಷ್ಟೆಲ್ಲಾ ಸಂಭ್ರಮ ಸಡಗರ ಯಾವ ಪುರುಷಾರ್ಥಕ್ಕೆ? ಯಾವ ಸಾಧನೆಗೆ?

ಜನರಿಗೆ ತೋರಿಸಲು ಒಂದೇ ಒಂದು ದೊಡ್ಡ ಸಾಧನೆಯೂ ಇಲ್ಲದಿದ್ದಾಗ, ವೈಫಲ್ಯಗಳನ್ನೇ ಸಾಧನೆಗಳೆಂದು ಬಿಂಬಿಸಲು ಈ ಸಂಭ್ರಮವೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ವಾಸ್ತವ ಚಿತ್ರಣ – ಪ್ರತಿಯೊಂದು ವರ್ಗಕ್ಕೂ ದ್ರೋಹ!

  • ಮಹಿಳೆಯರು: ಗೃಹಲಕ್ಷ್ಮಿಯ ಹಣಕ್ಕಾಗಿ ತಿಂಗಳುಗಟ್ಟಲೆ ಕಾಯುವ, ಕಚೇರಿ–ಬ್ಯಾಂಕ್‌ಗಳ ಬಾಗಿಲು ತಟ್ಟುವ ಪರಿಸ್ಥಿತಿ.
  • ಯುವಜನತೆ: ಉದ್ಯೋಗ ಸಿಗಬೇಕಾದರೆ ಅರ್ಹತೆಗಿಂತ ಲಂಚವೇ ಮುಖ್ಯ ಎನ್ನುವಂತಹ ಲಜ್ಜೆಗೇಡಿತನದ ಆಡಳಿತ!
  • ವಿದ್ಯಾರ್ಥಿಗಳು: ಸಮಯಕ್ಕೆ ಸಿಗದ ಪಠ್ಯಪುಸ್ತಕಗಳು; ತಲೆಯ ಮೇಲೆ ಸೋರುವ, ಕುಸಿಯುತ್ತಿರುವ ಶಾಲಾ ಕೊಠಡಿಗಳು; ಒಂದೇ ದಿನಕ್ಕೆ ಹರಿದುಹೋಗುವ ಕಳಪೆ ಶೂ–ಸಾಕ್ಸ್!
  • ರೈತರು: ಬೆಳೆನಷ್ಟದಿಂದ ಕಂಗಾಲಾದ ಅನ್ನದಾತನಿಗೆ ಬರ ಪರಿಹಾರವೂ ಇಲ್ಲ, ಸರ್ಕಾರದ ಸ್ಪಂದನೆಯೂ ಇಲ್ಲ!
  • ಬಡವರು: ವೃದ್ಧರು, ವಿಧವೆಯರು, ಅಂಗವಿಕಲರಿಗೆ ಆಸರೆಯಾಗಿದ್ದ ಪಿಂಚಣಿಗೂ ಕತ್ತರಿ!
  • ಮಧ್ಯಮ ವರ್ಗ: ದಿನಬಳಕೆಯ ವಸ್ತುಗಳ ಬೆಲೆ ಏರಿಕೆ, ತೆರಿಗೆಗಳ ಹೊರೆ – ಶ್ರೀಸಾಮಾನ್ಯನ ಬದುಕೇ ದುಬಾರಿ!
  • ಬೆಂಗಳೂರು: ರಸ್ತೆಯಲ್ಲಿ ಗುಂಡಿ, ರಸ್ತೆಯಂಚಿನಲ್ಲಿ ಕಸದ ರಾಶಿ – ಹೇಳಿದ್ದು ಬ್ರ್ಯಾಂಡ್ ಬೆಂಗಳೂರು, ಕೊಟ್ಟಿದ್ದು ಬ್ರೋಕನ್ ಬೆಂಗಳೂರು!

ಇದೇನಾ 100 ದಿನಗಳ ಸಾಧನೆ?

ಜನರ ಬದುಕು ಕತ್ತಲಲ್ಲಿ,
ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಾತ್ರ ದೀಪಾಲಂಕಾರ!

ರಾಜ್ಯಕ್ಕೆ ಬೇಕಾಗಿದ್ದು ಅಭಿವೃದ್ಧಿಯ ಬೆಳಕು.
ನೀವು ಕೊಟ್ಟಿದ್ದು ವೇದಿಕೆಯ ಥಳಕು!

ಯುವಕರಿಗೆ ಬೇಕಾಗಿದ್ದು ಉದ್ಯೋಗ.
ನೀವು ಕೊಟ್ಟಿದ್ದು ಜಾಹೀರಾತು!

ರೈತರಿಗೆ ಬೇಕಾಗಿದ್ದು ಪರಿಹಾರ.
ನೀವು ಕೊಟ್ಟಿದ್ದು ಸಮಾವೇಶ!

ಮಹಿಳೆಯರಿಗೆ ಬೇಕಾಗಿದ್ದು ಸಮಯಕ್ಕೆ ಹಣ.
ನೀವು ಕೊಟ್ಟಿದ್ದು ಫೋಟೋಶೂಟ್!

ವಾಸ್ತವದ ಕತ್ತಲೆಯನ್ನು ಮರೆಮಾಚಲು
ವೇದಿಕೆಗೆ, ಕಟ್ಟಡಕ್ಕೆ ವಿದ್ಯುತ್ ದೀಪಾಲಂಕಾರ;
ಸಾಧನೆಯ ಶೂನ್ಯತೆಯನ್ನು ಮುಚ್ಚಿಹಾಕಲು
ಪ್ರಚಾರದ ಆರ್ಭಟ!

ಸಾಧನೆ ತೋರಿಸಲು ಆಗಲಿಲ್ಲ, ಸಿಂಗಾರ ತೋರಿಸುತ್ತಿದ್ದೀರಾ.
ಅಭಿವೃದ್ಧಿ ತೋರಿಸಲು ಆಗಲಿಲ್ಲ, ದೀಪಾಲಂಕಾರ ತೋರಿಸುತ್ತಿದ್ದೀರಾ.
ಆಡಳಿತ ತೋರಿಸಲು ಆಗಲಿಲ್ಲ, ಆಡಂಬರ ತೋರಿಸುತ್ತಿದ್ದೀರಾ!

ಕೆಲಸ ಶೂನ್ಯ – ಪ್ರಚಾರ ಭರಪೂರ.
ಸಾಧನೆ ಶೂನ್ಯ – ಸಡಗರ ಭರ್ಜರಿ.
ಜನರ ಸಂಕಷ್ಟ ಅಪಾರ – ಸರ್ಕಾರದ ಸಂಭ್ರಮ ಅದ್ದೂರಿ!

ಸಿಎಂ ಡಿ.ಕೆ.ಶಿವಕುಮಾರ್ ಅವರೇ, ರಾಜ್ಯ ಬೆಳಗಲಿಲ್ಲ – ನಿಮ್ಮ ವೇದಿಕೆ ಬೆಳಗಿತು.ಜನರ ಬದುಕು ಬದಲಾಗಲಿಲ್ಲ – ನಿಮ್ಮ ಪ್ರಚಾರ ಮಾತ್ರ ಕಂಗೊಳಿಸಿತು.

ಇದು ಶತದಿನೋತ್ಸವವಲ್ಲ, ಸಾಧನೆಯ ಶೂನ್ಯತೆಯನ್ನು ದೀಪಾಲಂಕಾರದ ಹಿಂದೆ ಮುಚ್ಚುವ ವ್ಯರ್ಥ ಪ್ರದರ್ಶನ!

ಯಾವ ಸಾಧನೆಗೆ ಈ ಸಂಭ್ರಮ? ಯಾವ ಸಾಧನೆಗೆ ಈ ಸಡಗರ? ನಾಚಿಕೆಯಾಗಬೇಕು ಕಾಂಗ್ರೆಸ್ ಸರ್ಕಾರಕ್ಕೆ ಎಂದು ಕಿಡಿಕಾರಿದ್ದಾರೆ.

Related Articles

Back to top button