Latest

*ಜನಪರ ಸರ್ಕಾರಕ್ಕೆ ಶತದಿನ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ*

ಜನಪರ ಸರ್ಕಾರಕ್ಕೆ ಶತದಿನ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ

ಬೆಳಗಾವಿ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ನೂರು ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ ಸಲ್ಲಿಸಿದ್ದಾರೆ.

Home add -Advt

ಮುಖ್ಯಮಂತ್ರಿಯಾಗಿ ಕಳೆದ ನೂರು ದಿನಗಳು ಕೇವಲ ಅಧಿಕಾರದ ಅವಧಿಯ ಲೆಕ್ಕವಲ್ಲ; ಕೋಟ್ಯಂತರ ಕನ್ನಡಿಗರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಬದ್ಧತೆ, ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಹೊಣೆಗಾರಿಕೆ ಮತ್ತು ಕರ್ನಾಟಕದ ಭವಿಷ್ಯವನ್ನು ಕಟ್ಟುವ ದೂರದೃಷ್ಟಿಯ ದಿಕ್ಸೂಚಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

“ಅಧಿಕಾರಕ್ಕಿಂತ ಜನರೇ ದೊಡ್ಡವರು, ಜನರ ನಂಬಿಕೆ ಮತ್ತು ವಿಶ್ವಾಸವೇ ಅತ್ಯಂತ ಮಹತ್ವದ್ದು ಎಂಬ ಆಶಯದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತ ನಡೆಸುತ್ತಿದ್ದಾರೆ. ಜನರಿಗೆ ಇಂದು ಏನು ಸಿಕ್ಕಿದೆ ಎಂಬುದರ ಜೊತೆಗೆ ನಾಳೆ ಅವರಿಗೆ ಇನ್ನೇನು ಬೇಕು ಎಂಬುದನ್ನು ಅರಿತು ಕೆಲಸ ಮಾಡುತ್ತಿರುವುದು ಅವರ ಆಡಳಿತದ ವಿಶೇಷತೆ,” ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಮತ್ತು ನೆಮ್ಮದಿ ನೀಡಿವೆ. ಇದರೊಂದಿಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ 7.5% ಮೀಸಲಾತಿ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕ್ರಮ, ಉದ್ಯೋಗ ಸೃಷ್ಟಿ, ರೈತರ ಹಿತ, ಗ್ರಾಮೀಣ ಅಭಿವೃದ್ಧಿ ಹಾಗೂ ಯುವಜನರ ಸಬಲೀಕರಣಕ್ಕೆ ಕೈಗೊಂಡಿರುವ ಕ್ರಮಗಳು ಶ್ಲಾಘನೀಯವಾಗಿವೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕವನ್ನು ಕೇವಲ ಕಲ್ಯಾಣ ರಾಜ್ಯವನ್ನಾಗಿ ಮಾತ್ರವಲ್ಲದೆ, ಉದ್ಯೋಗ, ಕೈಗಾರಿಕೆ, ತಂತ್ರಜ್ಞಾನ, ಶಿಕ್ಷಣ ಮತ್ತು ಮೂಲಸೌಕರ್ಯದಲ್ಲಿ ಮುಂಚೂಣಿ ರಾಜ್ಯವನ್ನಾಗಿ ರೂಪಿಸುವ ಉದ್ದೇಶದಿಂದ ‘ಬಿಯಾಂಡ್ ಬೆಂಗಳೂರು’, ಎಐ ಶಿಕ್ಷಣ, ಹೊಸ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ದೂರದೃಷ್ಟಿಯ ಯೋಜನೆಗಳಿಗೆ ಚಾಲನೆ ನೀಡಿರುವುದು ಭವಿಷ್ಯದ ಕರ್ನಾಟಕಕ್ಕೆ ಭದ್ರ ಬುನಾದಿ ಹಾಕಲಿದೆ ಎಂದು ಅವರು ಹೇಳಿದ್ದಾರೆ.

“ಸಿದ್ದರಾಮಯ್ಯನವರು ಹಾಕಿಕೊಟ್ಟ ಸಾಮಾಜಿಕ ನ್ಯಾಯದ ಗಟ್ಟಿಯಾದ ಅಡಿಪಾಯದ ಮೇಲೆ ಅಭಿವೃದ್ಧಿ ಮತ್ತು ಕಲ್ಯಾಣವನ್ನು ಸಮನ್ವಯಗೊಳಿಸಿ ಕರ್ನಾಟಕವನ್ನು ಮುನ್ನಡೆಸುವ ಕೆಲಸ ನಡೆಯುತ್ತಿದೆ. ಶತದಿನಗಳು ಸಾಧನೆಯ ಅಂತ್ಯವಲ್ಲ; ಮುಂದಿನ 500 ದಿನಗಳ ಅಭಿವೃದ್ಧಿಯ ಪಯಣಕ್ಕೆ ದಿಕ್ಸೂಚಿ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ಇನ್ನಷ್ಟು ಬಲಿಷ್ಠ, ಸಮೃದ್ಧ ಮತ್ತು ಜನಪರ ರಾಜ್ಯವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವಿದೆ,” ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಜನರ ಆಶಯಗಳಿಗೆ ಮತ್ತಷ್ಟು ಶಕ್ತಿಯುತವಾಗಿ ಸ್ಪಂದಿಸಿ, ಕರ್ನಾಟಕದ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯಲಿ ಎಂದು ಶುಭ ಹಾರೈಸಿದ್ದಾರೆ.

Related Articles

Back to top button