*ಸರ್ಕಾರ ಸುಳ್ಳು ಅಂಶಗಳನ್ನು ಹೇಳಿ ರಾಜ್ಯದ ಬಡ ಕೂಲಿಕಾರರ ದಾರಿ ತಪ್ಪಿಸುತ್ತಿದೆ: ಬಸವರಾಜ್ ಬೊಮ್ಮಾಯಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಜಿ ರಾಮ್ ಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಅಂಶಗಳನ್ನು ಹೇಳಿ ರಾಜ್ಯದ ಬಡವರ ಕೂಲಿಕಾರರ ದಾರಿ ತಪ್ಪಿಸುತ್ತಿದೆ. ಹಿಂದಿನ ನರೇಗಾ ಯೋಜನೆಯಲ್ಲಿ ಪ್ರತಿ ವರ್ಷ ನೂರು ದಿನಗಳ ಉದ್ಯೋಗ ಖಾತ್ರಿ ಇತ್ತು. ಈಗ 125 ದಿನಗಳಿಗೆ ಹೆಚ್ಚಿಗೆ ಮಾಡಿದೆ. ಈ 125 ದಿನಗಳನ್ನು ಗ್ರಾಮ ಪಂಚಾಯತಿಗಳೇ ನಿರ್ಧಾರ ಮಾಡಬಹುದು. ಆದರೆ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ ಎಂಬ ಭೀತಿಯನ್ನು ಕಾರ್ಮಿಕರಲ್ಲಿ ಹುಟ್ಟಿಸುತ್ತಿದೆ ಎಂದು ಬಿಜೆಪಿ ಸಂಸದ, ಮಾಜಿ ಸಿಎಂ ಬದ್ಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತು ರೈತರಿಗೆ ಅನುಕೂಲವಾಗಲು ಆರವತ್ತು ದಿನ ಕಾಲ ಕೃಷಿಯಲ್ಲಿ ಕೆಲಸ ಮಾಡಲು ಅನುಕೂಲ ಮಾಡಿಕೊಡುವ ದೃಷ್ಡಿಯಿಂದ ವರ್ಷದಲ್ಲಿ ಎರಡು ಬಾರಿ ಉದ್ಯೋಗ ಖಾತ್ರಿಯ ಕೆಲಸಗಳನ್ನು ಕೃಷಿಗೋಸ್ಕರ ರಜೆ ನೀಡಲಾಗಿದೆ. ಇದನ್ನು ರಾಜ್ಯ ಸರ್ಕಾರ ಆಕ್ಷೇಪ ಮಾಡುವ ಮುಖಾಂತರ ರೈತ ವಿರೋಧಿ ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ. ಇದು ಇಡೀ ದೇಶದ ರೈತರಿಂದ ಬೇಡಿಕೆಯ ಅನುಗುಣವಾಗಿದೆ. ಅಲ್ಲದೇ ಹೇಗಿದ್ದರೂ ವರ್ಷದಲ್ಲಿ 125 ದಿನ ಬಿಟ್ಟರೆ ಬೇರೆ ದಿನದಲ್ಲಿ ಬೇರೆ ರಂಗದಲ್ಲಿ ಕೆಲಸ ಮಾಡುವುದು ಅನಿವಾರ್ಯವಿದೆ.
ಜಿ ರಾಮ್ ಜಿ ಯೋಜನೆಯಲ್ಲಿ ಒಂದು ವಾರದಿಂದ ಹದಿನೈದು ದಿನಗಳ ಒಳಗೆ ಕಡ್ಡಾಯವಾಗಿ ಕಾರ್ಮಿಕರ ವೇತನ ಕೊಡುವ ಬಗ್ಗೆ ಸ್ಪಷ್ಟವಾಗಿದೆ. ಆದಾಗ್ಯೂ ರಾಜ್ಯ ಸರ್ಕಾರ ಅನುದಾನ ಸಿಗದೇ ಇರುವ ವಿಚಾರವನ್ನು ಹೇಳಿ ಕಾರ್ಮಿಕರಿಗೆ ಈ ಯೋಜನೆಯಿಂದ ದೂರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ನರೇಗಾ ಯೋಜನೆಯಲ್ಲಿ ಹಲವಾರು ಪ್ರಕರಣಗಳು ಭ್ರಷ್ಟಾಚಾರದಿಂದ ಕೂಡಿರುವುದು ಯೋಜನೆಯ ದುರ್ಬಳಕೆ ಆಗಿರುವುದು. ಸುಳ್ಳು ಕೂಲಿಕಾರರ ಹೆಸರು ಹೇಳಿ ವೇತನ ತೆಗೆದಿರುವ ಲೋಪ ಇದ್ದು ಅದನ್ನು ಸರಿಪಡಿಸಲು ಬಯೊಮೆಟ್ರಿಕ್ ತಂತ್ರಜ್ಞಾನ ಬಳಸಿ ಸೋರಿಕೆ ತಡೆಗಟ್ಟಲು ಯೋಜನೆ ಮಾಡಿದರೆ ಇದರಿಂದ ವಂಚನೆ ಆಗುತ್ತದೆ ಎಂದು ಸುಳ್ಳನ್ನು ರಾಜ್ಯ ಸರ್ಕಾರ ಹೇಳುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ 60/40 ಅನುಪಾತದಲ್ಲಿ ಹಂಚಿಕೊಳ್ಳುವ ನಿರ್ಧಾರದಿಂದ ಹೆಚ್ಚು ದಿನ ಹೆಚ್ಚು ಜನರಿಗೆ ಉದ್ಯೋಗ ಕೊಡಲು ಮತ್ತು ರಾಜ್ಯ ಸರ್ಕಾರಗಳು ಧುಂದು ವೆಚ್ಚ ಅನುಪಯುಕ್ತ ವೆಚ್ಚ, ಭ್ರಷ್ಟಾಚಾರ ಕಡಿಮೆ ಮಾಡಿ ರೈತ ಕೂಲಿಕಾರರಿಗೆ ಸಹಾಯ ಮಾಡುವ ಚಿಂತನೆ ಮಾಡಬೇಕಿದೆ. ಅದನ್ನು ಮಾಡದೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
ಎಲ್ಲ ಮೇಲಿನ ಅಂಶಗಳಿಂದ 125 ದಿವಸ ಉದ್ಯೋಗ ಕೊಡುವುದರಿಂದ ಗ್ರಾಮೀಣ ಪ್ರದೇಶದ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿದ್ದ ಭ್ರಷ್ಟಾಚಾರ ಸಂಪೂರ್ಣ ನಿವಾರಣೆ ಆಗುತ್ತದೆ. ಹಾಗೂ ಬಡವರು ಕಾರ್ಮಿಕರು ದೀನ ದಲಿತರಿಗೆ ನ್ಯಾಯ ಸಮ್ಮತ ಕೆಲಸ ಮತ್ತು ಕೂಡಲೇ ವೇತನ ಸಿಗುವ ವ್ಯವಸ್ಥೆ ಆಗುತ್ತದೆ. ಪಂಚಾಯತಿಗಳು ಯೋಜನೆಯನ್ನು ರೂಪಿಸುವ, ಅನುಷ್ಠಾನ ಮಾಡುವ ಸರ್ವ ಸ್ವತಂತ್ರ ಹೊಂದುತ್ತವೆ. ರಾಜ್ಯ ಸರ್ಕಾರದ ಮಧ್ಯ ಪ್ರವೇಶ ದಿಂದ ಮುಕ್ತವಾಗುತ್ತವೆ ಎಂದರು.
ಗ್ರಾಮೀಣ ಅವಶ್ಯಕತೆಯ ತಕ್ಕಂತೆ ಆಸ್ತಿಗಳ ನಿರ್ಮಾಣ ಆಗುತ್ತದೆ. ಇದರಿಂದ ವಿಕಸಿತ ಭಾರತದ ಗುರಿಗೆ ಗ್ರಾಮೀಣ ಪ್ರದೇಶದ ಬದುಕು ಮತ್ತು ವಿಕಾಸ ಮುಖಾಂತರ ಸಾಧನೆ ಆಗುವ ಕಲ್ಪನೆಯಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದೆ. ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹ್ವಾಣ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.




