ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಬೆಂಗಳೂರು – ಕೋಲಾರ ಮಧ್ಯ ಭಾಗದಲ್ಲಿ ಹಾರ್ಡವೇರ್ ಪಾರ್ಕ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎರಡು ದಿನಗಳ ದೆಹಲಿ ಪ್ರವಾಸ ಫಲಪ್ರದವಾಗಿದೆ ಎಂದರು. ಕೇಂದ್ರ ಐಟಿ-ಬಿಟಿ ಮತ್ತು ಕೌಶಲ್ಯ ಅಭಿವೃದ್ಧಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಈ ವಿಷಯದ ಕುರಿತು ಚರ್ಚೆ ಮಾಡಿದ್ದೇನೆ. ಈ ಯೋಜನೆ ಜಾರಿಗೆ ಅವರು ಆಸಕ್ತಿ ತೋರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಸೌಲಭ್ಯ ಹಾಗೂ ಆಪ್ಟಿಕಲ್ ಫೈಬರ್ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಮಾತುಕತೆ ನಡೆಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಈ ಕುರಿತಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಚರ್ಚೆ ನಡೆಸಿ ಮುಂದುವರೆಯಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಸ್ಕಿಲ್ ಯುನಿವರ್ಸಿಟಿ ಪ್ರಾರಂಭ ಮಾಡುವ ಉದ್ದೇಶವನ್ನು ಕೇಂದ್ರ ಸಚಿವರು ಹೊಂದಿದ್ದಾರೆ. ಎಲ್ಲರೂ ಸೇರಿ ಈ ಕುರಿತಾಗಿ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಸೆಟಲೈಟ್ ಟೌನ್ ರಿಂಗ್ ರೋಡ್ (ದಾಬಸ್ ಪೇಟೆಯಿಂದ ಮೈಸೂರು ರೋಡ್ ವರೆಗೂ) ನಿರ್ಮಾಣ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಸದ್ಯ ಕೆಲ ತಿಂಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ಹೇಳಿದರು.
ಉತ್ತರ ಕರ್ನಾಟಕದ ವಿಜಯಪುರ- ಸಂಕೇಶ್ವರ್ ಹೈವೇ ಡಿಪಿಆರ್ ಆಗುತ್ತಿದ್ದು , ಎರಡನೇ ಹಂತದ ಭಾರತ ಮಾಲಾದ ಅಡಿಯಲ್ಲಿ ಇನ್ನೂ 5 ರಸ್ತೆ ಕಾಮಗಾರಿ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಅವರು ತಿಳಿಸಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಸಂಬಂಧಪಟ್ಟಂತೆ ರೂ.400 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಇನ್ನು ರೂ.1500 ಕೋಟಿ ಹಣ ಬಿಡುಗಡೆ ಆಗಬೇಕಿದೆ ಎಂದು ಹೇಳಿದರು.
ರೈಲ್ವೆ ಕಾಮಗಾರಿಗಳಿಗೆ ವೇಗ:
ಇದೇ ಸಮಯದಲ್ಲಿ ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು ಸಬರ್ಬನ್ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ತಿಳಿಸಿದೆ. ಇದಲ್ಲದೆ ರಾಜ್ಯದ ಪ್ರಮುಖ ರೈಲ್ವೆ ಮಾರ್ಗಗಗಳಾದ ತುಮಕೂರಿನಿಂದ – ದಾವಣಗೆರೆ, ಹುಬ್ಬಳ್ಳಿ ಯಿಂದ ಬೆಳಗಾವಿ, ಬೀದರ್-ಗುಲ್ಬರ್ಗ ಕಾರ್ಯ ಆರಂಭ ಮಾಡಬೇಕು ಎಂದು ಕೇಳಿಕೊಳ್ಳಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ನಬಾರ್ಡ ಯೋಜನೆಗಳ ಅನುಷ್ಠಾನದ ಕುರಿತು ಚರ್ಚೆ ಆಗಿದೆ. ಜಿಎಸ್ ಟಿ ಪರಿಹಾರವನ್ನು ಮುಂದುವರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಶಿರಾಡಿ ಘಾಟ್ 4 ಪಥದ ರಸ್ತೆ ಬಗ್ಗೆ ಚರ್ಚೆ ನಡೆದಿದೆ. ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಬೆಳಗಾವಿ ಮಹಾನಗರ ಪಾಲಿಕೆ; ಮರುಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ