Politics

*ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದರೆ ಬಿಜೆಪಿ ಕಾರ್ಯಕರ್ತರ ಮೇಲೆ ಒತ್ತಡ ಹಾಕಿ. ಕೇಸ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಪ್ರಜಾಪಭುತ್ವ ಇಲ್ಲ. ಅಘೋಷಿತ ತುರ್ತುಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಹಾವೇರಿಯಲ್ಲಿ ಇಂದು ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷದ 45ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1975 ರಲ್ಲಿ ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರಿಂದ ಯಾರಿಗೂ ಸ್ವಾತಂತ್ರ್ಯ ಇರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಂದ ಶುರುವಾದ ಹೋರಾಟ ಸಂಪೂರ್ಣ ಕ್ರಾಂತಿಯಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಅಡ್ವಾಣಿಯವರು ಎಲ್ಲರೂ ನುಗ್ಗಿದರು.
1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ 1952ರ ವರೆಗೂ ರಾಷ್ಟ್ರೀಯ ಸರ್ಕಾರ ಇತ್ತು. ಯಾವುದೇ ಪಕ್ಷದ ಸರ್ಕಾರ ಇರಲಿಲ್ಲ. ಆ ಸರ್ಕಾರದಲ್ಲಿ ಶಾಮ ಪ್ರಸಾದ್ ಮುಖರ್ಜಿ ಅವರೂ ಇದ್ದರೂ, ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದನ್ನು ವಿರೋಧಿಸಿ ಒಂದು ದೇಶದಲ್ಲಿ ಒಬ್ಬರೇ ಪಧಾನಿ ಇರಬೇಕು. ಏಕ್ ನಿಶಾನ್ ಏಕ್ ಪ್ರಧಾನ್ ಎಂದು ಘೋಷಿಸಿ ರಾಜೀನಾಮೆ ನೀಡಿ ಹೊರಬಂದು ಹೋರಾಟ ಮಾಡಿದ ಧೀಮಂತ ನಾಯಕ ಶಾಮ ಪ್ರಸಾದ್ ಮುಖರ್ಜಿ. ಅವರಿಗಿಂತ ಮುಂಚೆ ದೀನ್ ದಯಾಳ್ ಉಪಾಧ್ಯಾಯ ಅವರು ಏಕ್ ಆತ್ಮ ಎಂಬ ಮಹಾನ್ ಉದ್ದೇಶದ ಮೂಲಕ ಈ ಸಂಸ್ಥೆಯನ್ನು ಕಟ್ಟಿದರು. ಅದರ ಮೂಲ ಧೈಯ ಅಂತ್ಯೋದಯ ಆಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೇ ನಮ್ಮ ಗುರಿ ಅಂತ ತಿಳಿದು ಆರಂಭಿಸಿದರು ಎಂದರು.
ಅದಕ್ಕಿಂತಲೂ ಮೊದಲು 1925 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿತ್ತು. ಡಾ. ಹೆಡಗೆವಾ‌ರ್ ಅವರು ಮೊದಲ ಸರಸಂಘಚಾಲಕರು ನಂತರ ಗುರೂಜಿಯವರು, ಸಾವರ್ಕರ್ ಹಾಗೂ ಬಾಲಗಂಗಾಧರ ತಿಲಕ ಅವರ ವಿಚಾರಧಾರೆಯ ಹಿನ್ನೆಲೆಯಲ್ಲಿ ಸಂಘ ಸ್ಥಾಪನೆಯಾಗಿತ್ತು. ನಾವೆಲ್ಲರೂ ಭಾರತೀಯರು ಎನ್ನುವ ಭಾವನೆ ಬರಬೇಕು. ಭಾರತೀಯ ಆತ್ಮ ಹಿಂದುತ್ತದಲ್ಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಆರಂಭಿಸಿದರು. ನಮ್ಮ ಪಕ್ಷ ಸ್ಥಾಪನೆಯಾಗಿ ಈಗ ನಾವು 45 ವರ್ಷಗಳನ್ನು ಪೂರೈಸಿದ್ದೇವೆ. ನಮಗೆ ನಮ್ಮ ಇತಿಹಾಸ ಗೊತ್ತಿರಬೇಕು. ನಮ್ಮ ಸಂಸ್ಕೃತಿ, ಧೈಯೋದ್ದೇಶ ಗೊತ್ತಿರಬೇಕು. ನಮ್ಮ ನೀತಿಗಳು ಗೊತ್ತಿರಬೇಕು ಎಂದರು.

Home add -Advt

ಸಂಕಲ್ಪ ದಿನ
ಈಗ ಎಲ್ಲವೂ ವ್ಯಾಪಾರಿಕರಣವಾಗಿದೆ. ವ್ಯಾಪಾರಸ್ಥರಷ್ಟೇ ವ್ಯಾಪಾರ ಮಾಡುತ್ತಿಲ್ಲ. ರಾಜಕಾರಣಿಗಳು, ಸಾರ್ವಜನಿಕರು, ದೊಡ್ಡ ಸಂಸ್ಥೆಗಳು, ಎನ್‌ಜಿಒಗಳು ಎಲ್ಲವೂ ವ್ಯಾಪಾರ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ತನ್ನದೇ ಆದ ದ್ವೇಯ ಇಟ್ಟುಕೊಂಡು ಅಧಿಕಾರ ಬರಲಿ ಬರದಿರಲಿ ಎಂದು ಗಟ್ಟಿಯಾಗಿ ನಿಂತು ಒಂದು ದೇಶವನ್ನು ಕಟ್ಟುವ ಉದ್ದೇಶದಿಂದ ಬಿಜೆಪಿ ಹುಟ್ಟಿದೆ ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಪೀಳಿಗೆಗೆ ಬಂದಿದೆ. ಇದನ್ನು ಅರಿತು ನಾವು ಮುನ್ನಡೆಯಬೇಕು. ನಮ್ಮ ಮೂಲ ವಿಚಾರಗಳಿಗೆ ಕಟಿಬದ್ಧರಾಗಿ ನಾವು ಸಮಾಜವನ್ನು ಕಟ್ಟುತ್ತೇವೆ ಎಂದು ಬಿಜೆಪಿ ಧ್ವಜದ ಅಡಿಯಲ್ಲಿ ನಾವು ಮುನ್ನಡೆಯುತ್ತೇವೆ ಎಂದು ಸಂಕಲ್ಪ ಮಾಡುತ್ತೇವೆ. ಸಂಸ್ಥಾಪಕ ದಿನ ಸಂಕಲ್ಪ ದಿನವಾಗಬೇಕು ಎಂದು ಹೇಳಿದರು.

ಕಾಂಗ್ರೆಸ್‌ ನಿಂದ ಒಬಿಸಿಗೆ ಅನ್ಯಾಯ
ನಮ್ಮ ಮುಂದೆ ಎರಡು ದಾರಿಗಳಿವೆ. ಒಂದು ಪವರ್ ಪೊಲಿಟಿಕ್ಸ್ ಹಾಗೂ ಇನ್ನೊಂದು ಪಿಪಲ್ ಪೊಲಿಟೆಕ್, ಕೇವಲ ಅಧಿಕಾರಕ್ಕಾಗಿಯೇ ರಾಜಕಾರಣ ಮಾಡುವ ಒಂದು ವರ್ಗವಿದೆ. ನಾವೇನು ಸನ್ಯಾಸಿಗಳಲ್ಲ. ಜನರ ಸೇವೆ ಜನರ ಸಂಕಷ್ಟ ತಿಳಿದು ಅವರ ಮುಖಾಂತರ ನಮಗೆ ಅಧಿಕಾರ ಬಂದಾಗ ಜನರಿಗೆ ನ್ಯಾಯ ಕೊಡಲು ಸಾಧ್ಯವಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜನಪರ ಕೆಲಸ ಮಾಡಿದೆ. ರೈತರು, ತಾಯಂದಿರು, ಎಸ್ಸಿ ಎಸ್ಪಿ, ಒಬಿಸಿ ಜನಾಂಗಕ್ಕೆ ಯಾವಾಗಲೂ ಸಹಾಯ ಮಾಡುತ್ತ ಬಂದಿದೆ. ನಮ್ಮ ಬೆನ್ನನ್ನು ನಾವು ಯಾವತ್ತೂ ಚಪ್ಪರಿಸಿಕೊಳ್ಳುವುದಿಲ್ಲ. ಆದರೆ, ಕಾಂಗ್ರೆಸ್ ಯಾವಾಗಲೂ ಪ್ರಚಾರ ಮಾಡಿಕೊಳ್ಳುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬಿಸಿ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಪಕ್ಷ ಒಬಿಸಿಗೆ ಏನು ಮಾಡಿದ್ದಾರೆ. ರಾಜ್ಯದಲ್ಲಿ ಒಬಿಸಿ ಸಿಎಂ ಇದ್ದಾರೆ. ಒಬಿಸಿ ನಿಗಮಗಳಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಎಸಿ ಎಸ್ಟಿ ಮೀಸಲಾತಿ ಹೆಚ್ಚಳವನ್ನು ನಾವು ಮಾಡಿದ್ದೇವೆ. ಯಾವ ಮುಖ್ಯಮಂತ್ರಿ ಇಂತಹ ಗಟ್ಟಿ ನಿರ್ಧಾರ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಬಿಜೆಪಿ ಅಧಿಕಾರಕ್ಕೆ
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅವರು ಹೇಳಿದಷ್ಟೇ ಕಮಿಷನ್ ನಿರ್ಧಾರವಾಗುತ್ತಿದೆ. ಕಳೆದ ವರ್ಷ 40 ಸಾವಿರ ಹೆಚ್ಚಿನ ತೆರಿಗೆ ಹಾಕಿದ್ದರು, ಈ ವರ್ಷ ಬಜೆಟ್ ಇಲ್ಲದೇ 60 ಸಾವಿರ ಕೋಟಿ ಹೆಚ್ಚಿಗೆ ತೆರಿಗೆ ಹಾಕಿದ್ದಾರೆ. ಹಾಲು, ಡಿಸೇಲ್, ಕರೆಂಟ್ ಎಲ್ಲ ದರ ಹೆಚ್ಚಳ ಮಾಡಿದ್ದಾರೆ. ಇವತ್ತು ಅಭಿವೃದ್ಧಿ ಶೂನ್ಯ ಸರ್ಕಾರ ರಾಜ್ಯದಲ್ಲಿದೆ. ಜನ ವಿರೋಧಿ ಸರ್ಕಾರ ಇದೆ. ವಾಜಪೇಯಿ ಅವರು ಹೇಳಿದಂಥ ಧೈನ್ಯತೆ ಇಲ್ಲ. ಪಲಾಯನ ಇಲ್ಲ. ನಮ್ಮ ಕಾರ್ಯಕರ್ತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕೇಸ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಪ್ರಜಾಪಭುತ್ತ ಇಲ್ಲ. ಅಘೋಷಿತ ತುರ್ತುಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಅದರ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಯಾರಿಗೆ ಕರ್ತವ್ಯ ಮಾಡುವ ಬದ್ಧತೆ ಇದೆ ಅವರು ಮುಂದೆ ಬರಬೇಕು. ಗಟ್ಟಿ ಕಾಳು ಬೇಕು ನಮಗೆ ಏನೇ ಕಷ್ಟ ಬರಲಿ ನಾವು ಗಟ್ಟಿಯಾಗಿ ನಿಂತು ಹೋರಾಟ ಮಾಡಬೇಕು. ರಾಜ್ಯದಲ್ಲಿ ಇವತ್ತೇ ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಹಾವೇರಿ ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವವರೆಗೂ ವಿರಮಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸೋಣ, ವಿಕಸಿತ ಭಾರತ ಮಾಡಲು ಎಲ್ಲರೂ ಪಯತ್ನ ಪಡೋಣ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕರು ಹಾಗೂ ಹಾವೇರಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾದ ಅರುಣಕುಮಾರ ಪೂಜಾರ, ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಯುವ ಮುಖಂಡರಾದ ಭರತ ಬೊಮ್ಮಾಯಿ, ಭೋಜರಾಜ ಕರೂದಿ, ಮಂಜುನಾಥ ಓಲೇಕಾರ, ನಂಜುಡೇಶ ಕಳ್ಳೇರ, ಸಂತೋಷ ಆಲದಕಟ್ಟಿ ಶೋಭಾ ನಿಸ್ಸಿಮಗೌಡ್ರ, ಭಾರತಿ ಜಂಬಗಿ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button