ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ದಿನನಿತ್ಯ ಹಗಲು ದರೋಡೆ, ಪುಟ್ಟ ಮಕ್ಕಳ ಮೇಲೆ ಅತ್ಯಾಚಾರದಂತ ಅಪರಾಧ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿದ್ದು, ಅಪರಾಧ ಮಾಡುವವರಿಗೆ ಯಾರದೇ ಭಯವಿಲ್ಲದಂತಾಗಿದೆ. ಇದರಿಂದ ಕರ್ನಾಟಕ ಜಂಗಲ್ ರಾಜ್ಯ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಬೀದರನಲ್ಲಿ ಹಾಡ ಹಗಲೇ ಎಟಿಎಂಗೆ ಹಣ ತುಂಬಲು ಬಂದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ. ಆಡಳಿತ ನಡೆಸುವವರು ಕುರ್ಚಿಗಾಗಿ ಕಿತ್ತಾಟ ನಡೆಸುವುದರಲ್ಲಿ ನಿರತರಾಗಿದ್ದು, ಸರ್ಕಾರಕ್ಕೆ ಪೊಲೀಸರ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಪೊಲಿಸರಿಗೆ ಕ್ರಿಮಿನಲ್ ಗಳ ಮೇಲೆ ನಿಯಂತ್ರಣ ಇಲ್ಲದಂತಾಗಿದ್ದು, ಕರ್ನಾಟಕ ಜಂಗಲ್ ರಾಜ್ಯ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸರ್ಕಾರದ ಅವಧಿಯಲ್ಲಿ ಮೂಕ ಪ್ರಾಣಿಗಳು, ಮನುಷ್ಯರು ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಜನರು ದಂಗೆ ಏಳುತ್ತಾರೆ ಎಂದು ಎಚ್ಚರಿಸಿದ್ದಾರೆ.
ತುಂಗಭದ್ರಾ ನೀರು ಪರೀಕ್ಷೆಗೆ ಆಗ್ರಹ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ತುಂಗಭದ್ರಾ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಸುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ. ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಲು ಹೊರಗಡೆಯಿಂದ ಕಲುಷಿತ ನೀರು ಅಥವಾ ರಸಾಯನಿಕ ನದಿಗೆ ಸೇರ್ಪಡೆಯಾಗುತ್ತಿರುವ ಕುರಿತು ಜಿಲ್ಲಾಡಳಿತ ತಕ್ಷಣೆ ಪತ್ತೆ ಹಚ್ಚುವ ಕೆಲಸ ಮಾಡಬೇಕು. ಜಿಲ್ಲಾಧಿಕಾರಿಗಳು ಕೂಡಲೇ ನೀರನ್ನು ತಪಾಸಣೆಗೆ ಕಳುಹಿಸಿಕೊಡಬೇಕು. ಅಲ್ಲದೇ ನದಿಯ ನೀರನ್ನು ಯಾರೂ ಜನ ಜಾನುವಾರುಗಳಿಗೆ ಬಳಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ