ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯ ಸಭಾಧ್ಯಕ್ಷರಾಗಿ ಯು ಟಿ ಖಾದರ ಅವಿರೋಧವಾಗಿ ಆಯ್ಕೆ ಆಗಿರುವುದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಭ ಕೋರಿ, ನಿಮ್ಮ ತಕ್ಕಡಿ ಸಮವಾಗಿ ಇರಲಿ ಎಂದು ಹೇಳಿದರು.
ಇಂದು ವಿಧಾನಸಭೆಯಲ್ಲಿ ಅವರು ಮಾತನಾಡಿದರು. ಕರ್ನಾಟಕದ ವಿಧಾನ ಮಂಡಲ ತನ್ನದೇ ಆದ ಘನತೆ ಹೊಂದಿದೆ. ಇಂತಹ ಮಹತ್ವದ ಸದನದ ಸಭಾಧ್ಯಕ್ಷರಾಗಿ ನೀವು ಆಯ್ಕೆಯಾಗಿರುವುದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ನಿಮಗೆ ಇಪ್ಪತ್ತು ವರ್ಷದ ಅನುಭವ ಇದೆ. ನೀವು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುವಾಗ ಯಾವತ್ತೂ ಸಂಯಮ ಕಳೆದುಕೊಳ್ಳದೆ ಕೆಲಸ ಮಾಡಿದ್ದೀರಿ ಎಂದರು.
ವಿರೋಧ ಪಕ್ಷದ ಉಪ ನಾಯಕರಾಗಿಯೂ ಸಮರ್ಥವಾಗಿ ಕೆಲಸ ಮಾಡಿದ್ದೀರಿ. ಈ ಹಿಂದೆ ಈ ಹುದ್ದೆ ಅಲಂಕರಿಸಿದವರು ಈ ಹುದ್ದೆಯ ಗೌರವ ಹೆಚ್ಚಿಸಿದ್ದಾರೆ. ನೀವು ಕೊಡುವ ತೀರ್ಪು ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ತಕ್ಕಡಿ ಸಮವಾಗಿರಬೇಕು ಎಂದರು.
ಸಂವಿಧಾನದಲ್ಲಿ ವಿಶೇಷ ಸ್ಥಾನ ಸಭಾಪತಿಗಳಿಗೆ ಇದೆ. ಸರ್ಕಾರದ ಅಳಿವು ಉಳಿವಿನ ತೀರ್ಮಾನ ಆಗಿದೆ. ಕೆಲವು ತೀರ್ಪುಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದು ಇವೆ. ತಾವು ನೀಡುವ ತೀರ್ಪು ಲ್ಯಾಂಡ್ ಮಾರ್ಕ್ ಆಗುತ್ತದೆ. ನೀವು ನಿಷ್ಪಕ್ಷಪಾತವಾಗಿ ನೀವು ಕೆಲಸ ಮಾಡಿ. ಪ್ರತಿಪಕ್ಷದಲ್ಲಿ ನಿಮ್ಮ ಸ್ನೇಹಿತರು ಹೆಚ್ಚಿದ್ದಾರೆ. ಆಡಳಿತ ಪಕ್ಷದಲ್ಲಿ ನಿಮ್ಮ ನಿಕಟ ಪೂರ್ವ ಪಕ್ಷದ ಆತ್ಮೀಯರು ಇದ್ದಾರೆ. ಇಬ್ಬರನ್ನೂ ಸಮನಾವಾಗಿ ನೋಡಿ ಎಂದು ಸಲಹೆ ನೀಡಿದರು.
ಒಂದು ಗಾದೆ ಮಾತಿದೆ. ಅಪೋಜಿಷನ್ ಹ್ಯಾಸ್ ವೇ, ಗೌರ್ನಮೆಂಟ್ ಹ್ಯಾಸ್ ವೇ. ಹೀಗಾಗಿ ಪ್ರತಿಪಕ್ಷಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಬಾರಿ ಹೊಸ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ. ಅವರಿಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡಿ ಹೊಸ ವಿಚಾರಗಳು ಹೊರಬರಲಿ ಎಂದರು.
ನೀವು ಪ್ರಗತಿಪರರಿದ್ದೀರಿ, ನಿಮ್ಮ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕೆಲಸ ಮಾಡಿದ್ದೀರಿ. ರಾಜ್ಯದ ವಿಚಾರದಲ್ಲಿಯೂ ನೀವು ಎಲ್ಲ ಸಮುದಾಯಗಳನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ. ಆ ಕೆಲಸವನ್ನು ನೀವು ಮಾಡುತ್ತೀರಿ ಎಂಬ ನಂಬಿಕೆ ಇದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ