ಮಕ್ಕಳ ಚಲನವಲದ ಕಡೆ ಲಕ್ಷ್ಯವಿಲ್ಲದಿದ್ದರೆ ಹೀಗಾದೀತು
ಪ್ರಗತಿವಾಹಿನಿ ಸುದ್ದಿ, ನಿಜಾಮಾಬಾದ್ –
ಕಣ್ಣ ಮುಂದೆ ಆಟವಾಡುತ್ತಿದ್ದ ಮಕ್ಕಳು ಇದ್ದಕ್ಕಿದ್ದಂತೆ ಕಾಣೆಯಾಗಿ, ಶವವಾಗಿ ಪತ್ತೆಯಾದರೆ ಯಾವ ತಂದೆ-ತಾಯಿಗೆ ಆ ದುಃಖ ಭರಿಸುವ ಶಕ್ತಿ ಇರುತ್ತದೆ ಹೇಳಿ. ಇಂತಹ ಘಟನೆಗಳನ್ನೇ ನೋಡಿ, ನಿಜಕ್ಕೂ ದೇವರಿದ್ದಾನಾ ? ಎಂಬ ಸಂದೇಹ ಬಂದು ಬಿಡುತ್ತದೆ. ಅವನೆಂತಹ ಕ್ರೂರಿ ಎನಿಸಿ ಬಿಡುತ್ತದೆ.
ನಿನ್ನೆ ಮಧ್ಯಾಹ್ನ ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳು ಕಾಣೆಯಾಗಿ ನಂತರ ಶವವಾಗಿ ಪತ್ತೆಯಾಗಿರುವ ದುರಂತ ಕಥೆ ಇದು. ನೆರೆ ರಾಜ್ಯ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮುಜಾವುದ್ದೀನ್ ನಗರದಲ್ಲಿ ಈ ಘೋರ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಸರಿ ಸುಮಾರು 3 ಘಂಟೆಗೆ ರಿಯಾಜ್ ( 10 ವರ್ಷ ) ಮತ್ತು ಮೊಹಮ್ಮದ್ ( 5 ವರ್ಷ ) ಎಂದಿನಂತೆ ಮನೆಯ ಮುಂದೆ ಆಟವಾಡುತ್ತಿದ್ದರು.
ಮನೆಯ ಮುಂದೆಯೇ ಇದ್ದಾರಲ್ಲ ಎಂದು ಅವರ ಪೋಷಕರೂ ಸಹ ಅವರ ಬಗ್ಗೆ ಅಷ್ಟೇನು ತಲೆ ಕೆಡಿಸಿಕೊಳ್ಳಲಿಲ್ಲ. ಆಟವಾಡುತ್ತಾ ಇಬ್ಬರು ಮಕ್ಕಳು ಪಕ್ಕದ ಮನೆಯ ಬಳಿಗೆ ಹೋಗಿದ್ದಾರೆ, ಅಲ್ಲಿಯೂ ಸ್ವಲ್ಪ ಹೊತ್ತು ಆಟವಾಡಿದ ಮಕ್ಕಳ ಕಣ್ಣಿಗೆ ಅಲ್ಲೇ ಬದಿಯಲ್ಲಿ ನಿಂತಿದ್ದ ಕಾರು ಕಣ್ಣಿಗೆ ಬಿದ್ದಿದೆ, ಅದರಲ್ಲೂ ಕಾರಿನ ಡೋರ್ ಎಳೆಯುತ್ತಿದ್ದಂತೆ ತೆರೆದು ಕೊಂಡಿದೆ.
ಡೋರ್ ತೆರೆಯುತ್ತಿದ್ದಂತೆ ಮಕ್ಕಳು ಸಂತೋಷದಿಂದ ಕಾರ್ ಒಳಕ್ಕೆ ಹೋಗಿ ಆಟವಾಡಲು ಶುರು ಮಾಡಿದ್ದಾರೆ, ಆದರೆ ಅವರ ಪಾಲಿನ ಜವರಾಯ ಅದೇ ಕಾರಿನಲ್ಲಿದ್ದಾನೆ ಎಂದು ಅವರಿಗೆ ಹೇಗೆ ತಾನೇ ತಿಳಿಯಲು ಸಾಧ್ಯ. ಆಟವಾಡುತ್ತಿದ್ದ ಮಕ್ಕಳು ಡೋರ್ ಲಾಕ್ ಮಾಡಿದ್ದಾರೆ ಆದರೆ ಅದನ್ನು ತೆರೆಯಲು ಗೊತ್ತಾಗದೆ ಅಲ್ಲಿಯೇ ನಿದ್ರೆಗೆ ಜಾರಿದ್ದಾರೆ.
ಇತ್ತ ಮಕ್ಕಳು ಕಾಣದೆ ಕಂಗಾಲಾದ ಪೋಷಕರು ಹುಡುಕಾಟ ನಡೆಸಿದ್ದಾರೆ. ಎಲ್ಲಿ ಹುಡುಕಿದರೂ ಮಕ್ಕಳ ಸುಳಿವೇ ಇಲ್ಲ. ಇತ್ತ ಕಾರಿನಲ್ಲಿದ್ದ ಮಕ್ಕಳಿಗೆ ಉಸಿರಾಟದ ಸಮಸ್ಯೆ ಉಂಟಾಗಿ ನಿದ್ದೆಯಿಂದ ಚಿರನಿದ್ದೆಗೆ ಜಾರಿದ್ದಾರೆ. ಮರುದಿನ ಬೆಳಿಗ್ಗೆ ತಂದೆತಾಯಿಗೆ ತಮ್ಮ ಪ್ರೀತಿಯ ಮಕ್ಕಳು ಸಿಕ್ಕಿದ್ದು ಶವವಾಗಿ.
2 ತಿಂಗಳ ಹಿಂದೆ ಮಸ್ಕತ್ ನಲ್ಲಿ 4 ದಿನದ ಹಿಂದೆ ಮಹಾರಾಷ್ಟ್ರದಲ್ಲಿ ಕೂಡ ಇಂತಹುದೇ ಘಟನೆ ನಡೆದಿದೆ. ಕಳೆದ ವರ್ಷ ಕೂಡ ಇಂತಹ ಘಟನೆ ನಡೆದಿತ್ತು. ಪದೇ ಪದೆ ಇದೇ ಮಾದರಿಯ ಘಟನೆಗಳು ನಡೆಯುತ್ತಿವೆ.
ಪೋಷಕರೇ ನಿಮ್ಮ ಮಕ್ಕಳ ಚಲವಲನದ ಮೇಲೆ ನಿಗಾಯಿರಿಸಿ. ಹಾಗಂತ ಅವರನ್ನು ಆಡಲು ಬಿಡಬೇಡಿ ಎಂದೇನೂ ಇಲ್ಲ. ಆದರೆ ಅವರು ಆಡುವಾಗ ನೀವು ಜೊತೆಯಲ್ಲಿ ಇರಿ ಹಾಗೂ ಎಲ್ಲಿ ಆಟವಾಡಬೇಕು, ಏನು ಮಾಡಬೇಕು , ಏನು ಮಾಡಬಾರದು ಎಂಬುದರ ಬಗ್ಗೆ ತಿಳಿಸಿ ಹೇಳಿ. ಮುಖ್ಯವಾಗಿ ಅಪಾಯದ ವಸ್ತುಗಳ ಜೊತೆ ಚೆಲ್ಲಾಟ ಬೇಡವೆಂಬ ಸಂಗತಿಯನ್ನು ಅವರಿಗೆ ಅರಿವು ಮೂಡಿಸಿ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ