Kannada NewsKarnataka NewsUncategorized

*ಕರಡಿ ದಾಳಿ: ರೈತನಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ದೇವರಾಯಿ ಗ್ರಾಮದ ಬಳಿ ಸೋಮವಾರ ಸಂಜೆ ದನಗಳನ್ನು ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವೃದ್ಧ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ರೈತ ನಾರಾಯಣ ಚೌರಿ (65) ಅವರ ಮೇಲೆ ಹಿಂದಿನಿಂದ ದಾಳಿ ನಡೆಸಿದ ಕರಡಿ ಅವರ ಬೆನ್ನು ಮತ್ತು ಮೈಮೇಲೆ ಪರಚಿ ಗಾಯಗೊಳಿಸಿದೆ.

ನಾಗರಗಾಳಿ ಅರಣ್ಯ ವ್ಯಾಪ್ತಿಯ ದೇವರಾಯಿ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ನಾರಾಯಣ ಅವರ ಚೀರಾಟ ಕೇಳಿದ ಗ್ರಾಮದ ಜನರು ಅವರ ಬಳಿ ಬರುತ್ತಿರುವುದನ್ನು ಗಮನಿಸಿದ ಕರಡಿ ಅವರನ್ನು ಬಿಟ್ಟು ಅರಣ್ಯದಲ್ಲಿ ಮರೆಯಾಗಿದೆ. ಗಾಯಗೊಂಡ ನಾರಾಯಣ ಅವರನ್ನು ಗ್ರಾಮಸ್ಥರು ಖಾಸಗಿ ವಾಹನದಲ್ಲಿ ನಂದಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಎ.ಸಿ.ಎಫ್ ಸುನೀತಾ ನಿಂಬರಗಿ ಮತ್ತು ಆರ್.ಎಫ್.ಒ ನಾಗರಾಜ ಬಾಳೆಹೊಸೂರ ನಂದಗಡ ಆಸ್ಪತ್ರೆಗೆ ಭೇಟಿ ನೀಡಿ ಮುಂದಿನ ಚಿಕಿತ್ಸೆಗಾಗಿ ನಾರಾಯಣ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

Home add -Advt

Related Articles

Back to top button