ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನಮ್ಮ ಸ್ನೇಹಿತ. ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಕುಮಟಳ್ಳಿಯವರಿಗೆ ಮೋಸ ಆಗಲ್ಲ ಎಂದು ನೂತನ ಸಚಿವ ಶ್ರೀಮಂತ ಪಾಟೀಲ್ ತಿಳಿಸಿದ್ದಾರೆ.
ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಶ್ರೀಮಂತ ಪಾಟೀಲ್ ಬೆಳಗಾವಿಗೆ ಭೇಟಿ ನೀಡಿದ್ದು, ತಮ್ಮ ಕ್ಷೇತ್ರ ಕಾಗವಾಡಕ್ಕೆ ಆಗಮಿಸಿದರು. ಈ ವೇಳೆ ಮಾತನಾಡಿದ ಅವರು, ಸಕ್ಕರೆ ಖಾತೆ ಬೇಡ ಎಂದಿದ್ದೆ. ಹಾಗಾಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ಜವಳಿ ಖಾತೆ ಜವಾಬ್ದಾರಿ ಕೊಟ್ಟಿದ್ದಾರೆ. ಯಾವ ಖಾತೆಯೂ ಕೆಟ್ಟ ಖಾತೆ ಅಲ್ಲ. ಎಲ್ಲವೂ ಜನರ ಸೇವೆ ಮಾಡುವ ಖಾತೆಗಳೇ ಇರುತ್ತದೆ ಎಂದರು.
ಕುಮಟಳ್ಳಿಯವರಿಗೂ ಯೋಗ್ಯ ಸ್ಥಾನಮಾನ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ. ಇನ್ನು ಉಮೇಶ್ ಕತ್ತಿಯವರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಹೇಳಿದರು.
ಫೆ.17ರಂದು ಅಧಿವೇಶನ ಆರಂಭವಾಗಲಿದೆ. ಈ ಬಗ್ಗೆ ನಿನ್ನೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ನಾಳೆ ಮತ್ತೆ ಬೆಂಗಳೂರಿಗೆ ತೆರಳಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಉಸ್ತುವಾರಿ ಬದಲಾವಣೆ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ