*ರಾಜ್ಯಪಾಲರಿಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ; ರಸ್ತೆಯೇ ಬಂದ್: ಆಕ್ರೋಶಗೊಂಡ ವ್ಯಕ್ತಿಯಿಂದ ನಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗಾಗಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ರಸ್ತೆಯನ್ನು ಬಂದ್ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರು ಮಾರ್ಗ ಮಧ್ಯೆಯೇ ಕುಳಿತು ಪ್ರತಿಭಟಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಹೆಚ್ಎಎಲ್ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರಾಜ್ಯಪಾಲರಿಗಾಗಿ ರಸ್ತೆ ಮಾರ್ಗ ಬಂದ್ ಮಾಡಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಅಕ್ಕಪಕ್ಕದ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿ ಕಿಲೋ ಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡಿದ ವ್ಯಕ್ತಿಯೊಬ್ಬ ತಾಳ್ಮೆ ಕಳೆದುಕೊಂಡಿದ್ದು, ರಸ್ತೆ ಬಂದ್ ಮಾಡಿರುವ ಮಾರ್ಗಕ್ಕೆ ಬಂದು ನಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ.
ಇದೇ ವೇಳೆ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರ ಬಳಿ, ‘ನನ್ನ ಪತ್ನಿ ಗರ್ಭಿಣಿ, ಆಕೆಯನ್ನು ಆಸ್ಪತ್ತೆಗೆ ಕರೆದೊಯ್ಯಬೇಕು. ಆದರೆ ಟ್ರಾಫಿಕ್ ನಲ್ಲಿ ಸಿಲುಕಿದ್ದೇವೆ. ಈಗ ಹೇಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳಿಗಾಗಿ ಜನನಿಬಿಡ ರಸ್ತೆಯನ್ನು ಏಕಾಏಕಿ ಬಂದ್ ಮಾಡಿ ಅವರಿಗೆ ಅನುಕೂಲ ಮಾಡಿಕೊಟ್ಟರೆ, ಅನಾರೋಗ್ಯಕ್ಕೀಡಾದವರು, ಗರ್ಭಿಣಿಯರು ಟ್ರಾಫಿಕ್ ನಲ್ಲಿ ಸಿಲುಕಿ ಆಸ್ಪತ್ರೆಗೆ ತಲುಪಗದೇ ಒದ್ದಾಡುತ್ತಿದ್ದವರ ಗತಿ ಏನು? ಅವರಿಗೆ ಏನಾದರೂ ಆದರೆ ಯಾರು ಹೊಣೆ? ಎಂದು ವ್ಯಕ್ತಿ ಕಿಡಿಕಾರಿದ್ದಾರೆ.
ರಾಜ್ಯಪಾಲರ ಸಂಚಾರಕ್ಕಾಗಿ ಸುಮಾರು 30 ನಿಮಿಷ ಪೊಲೀಸರು ಟ್ರಾಫಿಕ್ ಬಂದ್ ಮಾಡಿದ್ದರು. ಇದರಿಂದ ವ್ಯಕ್ತಿ ಸಿಡಿದೆದ್ದಿದ್ದರು. ನಂತರ ವ್ಯಕ್ತಿಯನ್ನು ಪೊಲೀಸರು ಸಮಾಧಾನಪಡಿಸಿ ಕಳುಹಿಸಿದ್ದಾರೆ.



