*ಭಾರಿ ಮಳೆ, ಹೆದ್ದಾರಿಯಲ್ಲಿ ಭೂ ಕುಸಿತದಿಂದಾಗಿ ಸಾಲು ಸಾಲು ಅವಾಂತರ: ಬೆಳಗಾವಿ-ಗೋವಾ ಮಾರ್ಗದಲ್ಲಿ ವಾಹನ ಸವಾರರ ಪರದಾಟ*

ಪ್ರಗತಿವಾಹಿನಿ ಸುದ್ದಿ: ನಿರಂತರ ಮಳೆ, ಭೂ ಕುಸಿತದಿಂದಾಗಿ ಬೆಳಗಾವಿ-ಗೋವಾ ಸಂಪರ್ಕ ಕಲ್ಪಿಸುವ ರಸ್ತೆ ಬಹುತೇಕ ಬಂದ್ ಆಗಿದೆ. ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ಅನಮೋಡ ಮಾರ್ಗದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಂದೇ ಮಾರ್ಗದಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಇದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಭೂ ಕುಸಿತ ಹಿನ್ನೆಲೆಯಲ್ಲಿ ಅನಮೋಡ ಮಾರ್ಗದಲ್ಲಿ ಒಂದು ಭಾಗದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಲಘು ವಾಹನಗಳು, ದ್ವಿಚಕ್ರವಾಹನ, ಕಾರು ಸೇರಿದಂತೆ ಜೀವನಾವಶ್ಯಕ ವಸ್ತುಗನ್ನು ಸಾಗಿಸುವ ವಾಹನಗಳಿಗೆ ಅವಕಾಶ ನೀಡಲಾಗಿದ್ದು, ಒನ್ ವೇ ಸಂಚಾರ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯುಂಟಾಗಿದೆ. ಘಟ್ಟದ ಮಾರ್ಗದಲ್ಲಿ ಧಾರಾಕಾರ ಮಳೆ ನಡುವೆ ಹೊಂದ ಬಿದ್ದಿರುವ ರಸ್ತೆಯಲ್ಲಿ ವಾಹ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ.
ಕಳೆದ ವಾರ ಸುರುದ ಭಾರಿ ಮಳೆಯಿಂದ ಅನಮೋಡ ಮಾರ್ಗದಲ್ಲಿ ಭೂ ಕುಸಿತವಾಗಿದೆ. ಒಂದೆಡೆ ಭೂ ಕುಸಿತ ಮತ್ತೊಂದೆಡೆ ಸುರಿಯುತ್ತಿರುವ ಮಳೆ, ಇನ್ನೊಂದೆಡೆ ರಸ್ತೆ ಕಾಮಗಾರಿ, ಹೊಂಡ ಬಿದ್ದಿರುವ ರಸ್ತೆಗಳಲ್ಲಿ ಆತಂಕದಲ್ಲೇ ಓಡಾಡ ಬೇಕಾದ ಸ್ಥಿತಿ ವಾಹನ ಸವಾರರದ್ದು, ಈ ಭಾಗದಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆಯಾದರೂ ವಾಹನ ಸವಾರರ ಪರದಾಟ ಕೇಳುವವರು ಯಾರು? ಮೋಲೆಮ್ ನಿಂದ ಅನಮೋಡವರೆಗೂ ರಸ್ತೆ ಮಾರ್ಗ ಸಂಪೂರ್ಣ ಕೆಟ್ಟು ಹೋಗಿದೆ. ಲೋಕೋಪಯೋಗಿ ಇಲಾಖೆ ಮಣ್ಣು ಹಾಕಿ ಹೊಂಡ ಮುಚ್ಚಿದೆಯಾದರೂ ವಾಹನಗಳ ಸಂಚಾರ, ನಿರಂತರ ಮಳೆಯಿಂದ ರಸ್ತೆ ಮಣ್ಣುಮಯವಾಗಿದೆ. ತಾತ್ಕಾಲಿಕವಾಗಿ ಡಾಂಬರು ಹಾಕಿ ರಸ್ತೆ ಗುಂಡಿಯನ್ನು ಮುಚ್ಚಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.