Belagavi NewsBelgaum NewsCrimeKannada NewsKarnataka NewsNational

*ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡಿದ್ದ ಇಬ್ಬರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಕುರಪಿ ಪಡೆದು ಕಬ್ಬು ಕತ್ತರಿಸುವ ನೆಪದಲ್ಲಿ ಆಕೆಯ ಕೊರಳಲ್ಲಿದ್ದ ₹70 ಸಾವಿರ ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 5ರಂದು ಶಿರಗಾಂವ ಗ್ರಾಮದ ಕಾಶವ್ವಾ ಕಾಡಪ್ಪ ನಿಡಸೋಸಿ ಅವರು ಅವರಗೋಳ ರಸ್ತೆಯ ಬದಿಯಲ್ಲಿರುವ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಕಬ್ಬು ಕತ್ತರಿಸಿಕೊಳ್ಳಲು ಕುರಪಿ ಕೇಳಿ ಪಡೆದುಕೊಂಡಿದ್ದಾರೆ. ಕಬ್ಬು ಕತ್ತರಿಸಿದ ಬಳಿಕ ಕುರಪಿ ವಾಪಸ್ ನೀಡುವ ವೇಳೆ ಕಾಶವ್ವಾ ಅವರ ಕೊರಳಲ್ಲಿದ್ದ ಸುಮಾರು ₹70 ಸಾವಿರ ಮೌಲ್ಯದ 5 ಗ್ರಾಂ ತೂಕದ ಚಿನ್ನದ ಎಕ್ಸಾರ್ ಸರವನ್ನು ಬಲವಂತವಾಗಿ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು.

ಈ ಕುರಿತು ಕಾಶವ್ವಾ ನೀಡಿದ ದೂರಿನ ಮೇರೆಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 207/2026ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. 

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಎಸ್‌ಪಿ ಆರ್.ಬಿ. ಬಸರಗಿ ಹಾಗೂ ಗೋಕಾಕ ಡಿವೈಎಸ್‌ಪಿ ರವಿ ಡಿ. ನಾಯಿಕ ಅವರ ಮಾರ್ಗದರ್ಶನದಲ್ಲಿ ಹುಕ್ಕೇರಿ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಆರ್. ಗಣಾಚಾರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

ಅಕ್ಟೋಬರ್ 7ರಂದು ದುಪದಾಳ ಗ್ರಾಮದ ಪಲ್ಟಾದ ಕಲಂದರ ಮಹಿಲಾಂದೆ (21) ಹಾಗೂ ರಾಜ್ ಕಲಂದರ ಮಹಿಲಾಂದೆ (18) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ₹60 ಸಾವಿರ ಮೌಲ್ಯದ ಹೊಂಡಾ ಸೈನ್ ಬೈಕ್ (ಕೆಎ-23-ಇಹೆಚ್-7636) ಹಾಗೂ ಮಹಿಳೆಯಿಂದ ಕಿತ್ತುಕೊಂಡಿದ್ದ ₹70 ಸಾವಿರ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖೆ ವೇಳೆ ಆರೋಪಿಗಳು ಹುಕ್ಕೇರಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಮಂಗಳಸೂತ್ರ ಕಿತ್ತುಕೊಂಡಿದ್ದ ಪ್ರಕರಣದಲ್ಲೂ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ₹1.50 ಲಕ್ಷ ಮೌಲ್ಯದ 10 ಗ್ರಾಂ ತೂಕದ ಚಿನ್ನದ ಮಂಗಳಸೂತ್ರವನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ₹50 ಸಾವಿರ ಮೌಲ್ಯದ ಬಜಾಜ್ ಪಲ್ಸರ್ ಬೈಕ್ (ಕೆಎ-40-ಇಬಿ-2644) ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ, ಮದಿಹಳ್ಳಿ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್ ಕಳವು ಮಾಡಿದ್ದ ಪ್ರಕರಣದಲ್ಲೂ ಆರೋಪಿಗಳು ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ₹40 ಸಾವಿರ ಮೌಲ್ಯದ ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್ (ಕೆಎ-49-ವೈ-6735) ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಹುಕ್ಕೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button