Belagavi NewsBelgaum NewsCrimeKannada NewsKarnataka News

*ನಕಲಿ ಪತ್ರಕರ್ತನ ಮೇಲೆ ಸಿಸಿಬಿ ಪೊಲೀಸರ ದಾಳಿ: ಮಾದಕ ವಸ್ತು ಜಪ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಓರ್ವ ಯುವಕನನ್ನು ಬಂಧಿಸಿ, ₹45 ಸಾವಿರ ಮೌಲ್ಯದ ಮೆಥಾಂಫೆಟಮೈನ್ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ಅವರಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ಸಮರ್ಥನಗರದ ಬಳ್ಳಾರಿ ನಾಲಾ ಬಳಿಯ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಶಾಸ್ತ್ರಿನಗರ ನಿವಾಸಿ ಸತ್ಯಂ ಸಂತೋಷ ಕಾವೇಟಿಯಾ (21) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ತನ್ನ ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಮೇಲೆ ‘PRESS’ ಎಂದು ಬರೆಸಿಕೊಂಡಿದ್ದ ಆರೋಪಿ, ಸ್ಕೂಟರ್‌ನ ಡಿಕ್ಕಿಯಲ್ಲಿ ಮೆಥಾಂಫೆಟಮೈನ್ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿತನಿಂದ ₹45 ಸಾವಿರ ಮೌಲ್ಯದ ಮೆಥಾಂಫೆಟಮೈನ್ ಹಾಗೂ ₹20 ಸಾವಿರ ಮೌಲ್ಯದ ಹೊಂಡಾ ಆಕ್ಟಿವಾ ಸ್ಕೂಟರ್ ಸೇರಿ ಒಟ್ಟು ₹65 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ಕುರಿತು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 221/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 22(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಮಾದಕ ವಸ್ತು ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿದ ಸಿಸಿಬಿ ಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರು ಶ್ಲಾಘಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button