ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಕ್ಷರವೂ ಅರಿವಿನ ಮಾರ್ಗ, ಅಕ್ಷರವಿಲ್ಲದವನ ಬದುಕು ಅಪೂರ್ಣ. ಅಕ್ಷರದಿಂದ ವ್ಯಕ್ತಿಯ ವ್ಯಕ್ತಿತ್ವ ಬದಲಾಗುತ್ತದೆ. ಯಾರು ಈ ಅಕ್ಷರದಿಂದ ವಂಚಿತರಾಗಬಾರದು ಕಲಿತವರು ಕಲಿಸಬೇಕು ಕಲಿಯದವರು ಕಲಿಯಬೇಕು ಎಂದು ಬೆಳಗಾವಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎಂ ಜಯಶ್ರೀ ತಿಳಿಸಿದ್ದಾರೆ.
ರಾಮತೀರ್ಥ ನಗರದ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಆಯೋಜಿಸಿದ ಬೆಳಗಾವಿ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ 54ನೇ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆ ಪುರುಷ ಲಿಂಗ ಸಮಾನತೆ ನಗರ ಗ್ರಾಮೀಣ ಪ್ರಾದೇಶಿಕ ಸಮಾನತೆಯನ್ನು ಸಾಕ್ಷರತೆಯಲ್ಲಿ ತರಲು ಎಲ್ಲರೂ ಜಂಟಿಯಾಗಿ ಪ್ರಯತ್ನಿಸಬೇಕೆಂದು ಕರೆ ಕೊಟ್ಟರು.
ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ ಮಾತನಾಡಿ ಅನ್ನ ನೀರು ಗಾಳಿಯಷ್ಟೇ ಅಕ್ಷರವೂ ಮನುಷ್ಯನ ಮೂಲಭೂತ ಅವಶ್ಯಕತೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಅರುಣ್ ಕಟಾಂಬಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬೆಳಗಾವಿ ಜಿಲ್ಲಾಧಿಕಾರಿ. ಗೋಪಾಲ ಲಮಾಣಿ ಚಿಕ್ಕೋಡಿ ವಯಸ್ಕರ ಶಿಕ್ಷಣಾಧಿಕಾರಿ ಉಜ್ವಲಾ. ವಿ .ಮಗದುಮ್ ಉಪಸ್ಥಿತರಿದ್ದರು ಶ್ರೀದೇವಿ .ಜಿ. ಹುಕ್ಕೇರಿ ನಿರೂಪಿಸಿದರು. ಬೆಳಗಾವಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ಬಿ.ಎಸ್ .ಪಾಟೀಲ್ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಾಯಕರು ಎಂ .ಎಸ್.ಮಲ್ಲಾರಿ ಗೋಳ ವಂದಿಸಿದರು. ಸಾಕ್ಷರತಾ ಧ್ವಜಾರೋಹಣವನ್ನು ಈ ಸಂದರ್ಭದಲ್ಲಿ ನೆರವೇರಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸಾಕ್ಷರತಾ ಸಂಯೋಜಕರು,ಸಾಕ್ಷರತಾ ಕಾರ್ಯಕರ್ತರು,ಮಹಿಳಾ ಒಕ್ಕೂಟದ ಅಧ್ಯಕ್ಷರು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವೃಂದದವರು ಹಾಗೂ ಎನ್ ಜಿ ಒ ಮುಖ್ಯಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ