Kannada NewsLatest

ಸಿಎಂ ಭೇಟಿ ಎಫೆಕ್ಟ್: ಬೆಳಗಾವಿಯಲ್ಲಿ ಆಪರೇಶನ್ ಬಿಮ್ಸ್ ಆರಂಭ

 

 

ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಆಗಿರುವ ಕೆ.ಎ.ಎಸ್ ಅಧಿಕಾರಿ ಸಯೀದಾ ಆಫ್ರಿನ್ ಬಾನು ಬಳ್ಳಾರಿ ಪ್ರತ್ಯಕ್ಷ

 

ನಾನೇನು ಆಸ್ಪತ್ರೆಗೆ ಬಂದಿದ್ದೇನೋ, ಜಾತ್ರೆಗೆ ಬಂದಿದ್ದೇನೋ ಎನ್ನುವ ಅನುಮಾನ ಮೂಡಿದೆ ಎಂದಿದ್ದರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್ ಸೋಂಕಿತರ ಆರೈಕೆಗಾಗಿ ಅವರ ಜತೆಗೆ ಆಸ್ಪತ್ರೆಯ ಕಾರಿಡಾರ್ ನಲ್ಲಿ ಬಿಡಾರ ಹೂಡಿದ್ದ ರೋಗಿಗಳ ಕುಟುಂಬದ ಸದಸ್ಯರ(ಅಟೆಂಡರ್)ನ್ನು ಹೊರಗೆ ಕಳಿಸುವ ಮೂಲಕ ಬಿಮ್ಸ್ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.

ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಆಗಿರುವ ಕೆ.ಎ.ಎಸ್ ಅಧಿಕಾರಿ ಸಯೀದಾ ಆಫ್ರಿನ್ ಬಾನು ಬಳ್ಳಾರಿ ಸ್ವತಃ ಪಿಪಿಇ ಕಿಟ್ ಹಾಕಿಕೊಂಡು ಸೋಮವಾರ ಬಿಮ್ಸ್ ಕೋವಿಡ್ ವಾರ್ಡುಗಳಲ್ಲಿ ರೌಂಡ್ಸ್ ಹಾಕುವ ಮೂಲಕ ರೋಗಿಗಳ ಆರೈಕೆಗಾಗಿ ಆಸ್ಪತ್ರೆಯ ಕಾರಿಡಾರ್ ಗಳಲ್ಲಿದ್ದ ಕುಟುಂಬದ ಸದಸ್ಯರನ್ನು ಹೊರಗೆ ಕಳುಹಿಸಿದರು.

ನಾನೇನು ಆಸ್ಪತ್ರೆಗೆ ಬಂದಿದ್ದೇನೋ, ಜಾತ್ರೆಗೆ ಬಂದಿದ್ದೇನೋ ಎನ್ನುವ ಅನುಮಾನ ಮೂಡಿದೆ ಎಂದಿದ್ದರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ. ಇಷ್ಟು ದಿನ ಎಲ್ಲದಕ್ಕೂ ನಿರ್ಲಕ್ಷ್ಯವಹಿಸಿದ್ದ ಬಿಮ್ಸ್ ಅಧಿಕಾರಿ, ಸಿಬ್ಬಂದಿ ಇದೀಗ ಮುಖ್ಯಮಂತ್ರಿಗಳ ಭೇಟಿ ನಿಗದಿಯಾಗುತ್ತಿದ್ದಂತೆ ಚೋಳು ಕಡಿದವರಂತೆ ಎದ್ದು ಕುಳಿತಿದ್ದಾರೆ. ಆಪರೇಶನ್ ಬಿಮ್ಸ್ ಆರಂಭಿಸಿದ್ದಾರೆ.

ಉಪಾಹಾರ, ಔಷಧಿ ನೀಡುವ ನೆಪದಲ್ಲಿ ಕೋವಿಡ್ ವಾರ್ಡುಗಳನ್ನು ಪ್ರವೇಶಿಸುತ್ತಿದ್ದ ರೋಗಿಗಳ ಸಂಬಂಧಿಕರ ಮನವೊಲಿಸುವ ಪ್ರಯತ್ನ ಮಾಡಿದರು. ರೋಗಿಗಳಿಗೆ ಉಸಿರಾಟದ ತೊಂದರೆಯಿದೆ ಎಂಬ ನೆಪವೊಡ್ಡಿ ಕೆಲವರು ವಾರ್ಡುಗಳಲ್ಲಿ ಉಳಿಯುವ ಪ್ರಯತ್ನವನ್ನು ಮಾಡಿದರಾದರೂ ಪೊಲೀಸ್ ಸಿಬ್ಬಂದಿ ನೆರವಿನ ಮೂಲಕ ಅವರನ್ನು ಕೂಡ ಹೊರಗೆ ಕಳಿಸುವಲ್ಲಿ ಸಯೀದಾ ಆಫ್ರಿನ್ ಬಾನು ಬಳ್ಳಾರಿ ಯಶಸ್ವಿಯಾದರು.

ಇದೇ ಸಂದರ್ಭದಲ್ಲಿ ಕೋವಿಡ್ ವಾರ್ಡುಗಳಲ್ಲಿ ಸಂಚರಿಸಿದ ಅವರು, ಸೋಂಕಿತರ ಆರೋಗ್ಯವನ್ನು ವಿಚಾರಿಸುವ ಮೂಲಕ ಅವರ ಮನೋಬಲವನ್ನು ಹೆಚ್ಚಿಸಿದರು.

ಪಿಪಿಇ ಕಿಟ್ ಇದಲ್ಲದೇ ಕೋವಿಡ್ ವಾರ್ಡುಗಳಲ್ಲಿ ಪ್ರವೇಶಿಸಿದರೆ ಅಂತಹವರಿಂದ ಕುಟುಂಬದ ಇತರೆ ಸದಸ್ಯರಿಗೂ ಸೋಂಕು ತಗಲುವ ಅಪಾಯವಿರುತ್ತದೆ. ಆದ್ದರಿಂದ ರೋಗಿಗಳ ಜತೆ ಯಾರೂ ಇರುವ ಅಗತ್ಯವಿಲ್ಲ. ಸರಕಾರದ ಮಾರ್ಗಸೂಚಿ ಪ್ರಕಾರ ಎಲ್ಲರಿಗೂ ಉತ್ತಮ‌ ಊಟೋಪಹಾರ ನೀಡಲಾಗುತ್ತಿದೆ. ಚಿಕಿತ್ಸೆ ಸಂಬಂಧಿಸಿದಂತೆ ವೈದ್ಯರು ಹಾಗೂ ನರ್ಸ್ ಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಕುಟುಂಬದ ಸದಸ್ಯರು ರೋಗಿಗಳ ಜತೆ ಇರವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಕುಟುಂಬಸ್ಥರ ಮನವೊಲಿಸಿದರು.

ಬಿಮ್ಸ್ ನಲ್ಲಿ ಸೋಂಕಿತರ ಭೇಟಿಗೆ ಕುಟುಂಬದ ಸದಸ್ಯರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಆಗಿರುವ ಕೆ.ಎ.ಎಸ್ ಅಧಿಕಾರಿ ಸಯೀದಾ ಆಫ್ರೀನ್ ಬಾನು ಬಳ್ಳಾರಿ ಸ್ವತಃ ಪಿಪಿಇ ಕಿಟ್ ಹಾಕಿ ರೌಂಡ್ಸ್ ಹಾಕುವ ಮೂಲಕ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರು.

ಪೊಲೀಸ್ ‌ಹಾಗೂ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಜತೆಗೆ ಕಾರ್ಯಾಚರಣೆ ನಡೆಸಿದರೂ ಅನೇಕ ಜನರು ಆಸ್ಪತ್ರೆಯ ಕಾರಿಡಾರ್ ನಿಂದ ಹೊರಹೋಗಲು ವಿರೋಧ ವ್ಯಕ್ತಪಡಿಸಿದ ಘಟನೆಯೂ‌ ನಡೆಯಿತು. ಕಾರಿಡಾರ್ ನಲ್ಲಿದ್ದ ಸೋಂಕಿತರ ಕುಟುಂಬದ ಸದಸ್ಯರನ್ನು ಹೊರಗೆ ಕಳಿಸುವ ಸಂದರ್ಭದಲ್ಲಿ ಆಸ್ಪತ್ರೆಯ ಅಧೀಕ್ಷ ಡಾ.ಗಿರೀಶ್ ದಂಡಗಿ, ಡಾ.ಕೇಶವ್, ಪೊಲೀಸ್ ಇನ್ಸಪೆಕ್ಟರ್ ಜಾವೀದ ಮುಶಾಪುರಿ ಅವರು ಕೂಡ ಉಪಸ್ಥಿತರಿದ್ದರು.

ಸಿಎಂ ಬೆಳಗಾವಿ ಭೇಟಿ ಡೇಟ್ ಫಿಕ್ಸ್; ಸರಣಿ ಸಭೆ ಆರಂಭ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button