Latest

ಗ್ರಾಮ ಪಂಚಾಯತಿ ಚುನಾವಣೆಗೆ ಬಿಜೆಪಿ ಸಿದ್ಧತೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ಬರಲಿರುವ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯಿಂದ ಎಂಬತ್ತು ಪ್ರತಿಶತ ಸ್ಥಾನಗಳನ್ನು ಗೆಲ್ಲುವ ಯೋಜಿತ ಕಾರ್ಯತಂತ್ರ, ನಡೆಯುತ್ತಿದೆ ಎಂದು ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ ಪಕ್ಷದ ಕಾರ್ಯಾಲಯದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಗ್ರಾಮ ಪಂಚಾಯತಿ ಚುನಾವಣೆ ತಯಾರಿಗಾಗಿ ಜಿಲ್ಲೆಯ ಬಸ್ತವಾಡ ಹಾಗೂ ಸವದತ್ತಿಯಲ್ಲಿ ಡಿ.2ರಂದು ಪಕ್ಷದ ವತಿಯಿಂದ ಗ್ರಾಮಸ್ವರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಚುನಾವಣೆ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವುದಕ್ಕೆ ಸಿಕ್ಕಿರುವ ಒಂದು ಅವಕಾಶವೆಂದು ಪರಿಗಣಿಸಿ ಬಿಜೆಪಿ ಪಕ್ಷದ ಸಾಮೂಹಿಕ ನಾಯಕತ್ವ ಹಾಗೂ ನಮ್ಮದೇ ಕಾರ್ಯಕರ್ತರ ಪಡೆಯ ಮೂಲಕ ನಮ್ಮದೇ ಸರಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವುದರೊಂದಿಗೆ ಅತಿ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಲು ಈಗಾಗಲೇ ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿರುದರಿಂದ ಸಂಘಟನೆಗೆ ಸಹಕಾರಿಯಾಗಲಿದೆ. ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ನಮ್ಮದೇ ಸರಕಾರಗಳಿರುವುದೂ ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದ್ವಿತೀಯವಾಗಿ ಜನಪರ ಯೋಜನೆಗಳನ್ನು ಸಾಕಾರಗೊಳಿಸಿರುವುದೂ ನಮಗೆ ನೆರವಾಗಲಿದೆ. ಇದಲ್ಲದೆ ಅತ್ಯುತ್ತಮವಾದ ಸಂಘಟನಾತ್ಮಕ ಶಕ್ತಿ, ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ನಾಯಕತ್ವ ಹಾಗೂ ಶ್ರೇಷ್ಠ ವೈಚಾರಿಕತೆಯನ್ನು ನಮ್ಮ ಸಂಘಟನೆ ಅಳವಡಿಸಿಕೊಂಡಿಸಿರುವುದೂ ನಮಗೆ ಪೂರಕವಾದ ಅಂಶವಾಗಲಿದೆ ಎಂದರು.

ರಾಜ್ಯಸಭಾ ಸದಸ್ಯ‌ ಈರಣ್ಣ ಕಡಾಡಿ ಮಾತನಾಡಿ, ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಬಿ.ಎಸ್‌.ಯಡಿಯುರಪ್ಪನವರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ನಳಿನ ಕುಮಾರ ಕಟಿಲಟವರ ನೆತೃತ್ವದಲ್ಲಿ ಗ್ರಾಮಪಂಚಾಯಿತಿ ಗೆಲುವಿಗೆ ಕಾರ್ಯತಂತ್ರಗಳನ್ನು ರೂಪಿಸಿ ಕಾರ್ಯಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದು ದಿನಾಂಕ ಡಿ2 ರಂದು ಬೆಳಿಗ್ಗೆ 10ಘಂಟೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ, ಬೈಲಹೊಂಗಲ, ಖಾನಾಪೂರ, ಕಿತ್ತೂರ ಕ್ಷೇತ್ರದ ಹಾಗೂ ಮಧ್ಯಾಹ್ನ 2 ಘಂಟೆಗೆ ಸವದತ್ತಿ ಮಾಮಾನಿ ಕಲ್ಯಾಣ ಮಂಟಪದಲ್ಲಿ ಅರಭಾಂವಿ, ಗೋಕಾಕ, ಸವದತ್ತಿ ಮತ್ತು ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿರುವ ಬಿಜೆಪಿ ಪ್ರಮುಖ ಕಾರ್ಯಕರ್ತರು ಸರ್ಕಾರದ ಕೊವಿಡ್-19ನಿಯಮಗಳನ್ನು ಪಾಲಿಸಿಕೊಂಡು ಗ್ರಾಮಸ್ವರಾಜ್ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ರಾಜ್ಯದ ಪ್ರಮುಖ ನಾಯಕರಾದ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ, ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿ, ರಾಜ್ಯ ಸಚಿವರಾದ ಬಸವರಾಜ ಬೊಮ್ಮಾಯಿ, ಶಶಿಕಲಾ ಜೋಲ್ಲೆ, ರಮೇಶ ಜಾರಕಿಹೊಳಿ, ಸಿ.ಸಿ.ಪಾಟೀಲ, ಬಿ.ಸಿ.ಪಾಟೀಲ, ಶಿವರಾಂ ಹೆಬ್ಬಾರ, ಸಂಸದರಾದ ಅನಂತಕುಮಾರ ಹೆಗಡೆ, ಶಿವಕುಮಾರ ಉದಾಸಿ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಮ್.ರಾಜೇಂದ್ರ,ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಯುವ ಮೊರ್ಚಾ ಅಧ್ಯಕ್ಷ ಡಾ.ಸಂದೀಪ್ ಜಿಲ್ಲೆಯ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು ಪಕ್ಷದ ಪದಾಧಿಕಾರಿಗಳು ಜಿಲ್ಲೆಯ ಎರಡು ಕಡೆಗಳಲ್ಲಿ ಗ್ರಾಮಸ್ವರಾಜ್ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಮಾವೇಶಗಳಲ್ಲಿ ಪ್ರಮುಖ ಕಾರ್ಯಕರ್ತರು ಭಾಗವಹಿಸುತ್ತಿದ್ದು ಅವರನ್ನು ಗ್ರಾಮಪಂಚಾಯತ್ ಚುನಾವಣೆಗೆ ಸಜ್ಜುಗೊಳಸಲಾಗುತ್ತದೆ.

ಗ್ರಾಮಪಂಚಾಯಿತಿಗಳ ಗೆಲವಿಗಾಗಿ ಪಂಚಸೂತ್ರಗಳನ್ನೂ ಅಳವಡಿಸಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಲು ಸಹಕಾರಿಯಾಗಲಿದೆ. ಸಂಘಟಿತ ಯೋಜನೆ, ಪ್ರಯತ್ನಗಳ ಫಲದಿಂದ ಇಡೀ ರಾಜ್ಯದಲ್ಲಿ ಹಿಂದೆಗಿಂತಲೂ ಅತಿಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ‌ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೊಹಿತೆ, ರಾಜು ಚಿಕ್ಕನಗೌಡರ, ಸುಭಾಷ ಪಾಟೀಲ, ಜಿಲ್ಲಾ ಮಾಧ್ಯಮ ಪ್ರಮುಖ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ವಕ್ತಾರ ಸಂಜಯ ಕಂಚಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button