ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲೋಕಸಭಾ ಉಪಚುನಾವಣೆಯ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು ೧೫ ಅಬಕಾರಿ ಕಾನೂನು ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.
ರೂ. ೪,೪೮,೫೫೯.೬೮ ಮೌಲ್ಯದ ೨೦೩೦.೨೬ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಉಳಿದಂತೆ, ರೂ. ೧೦,೦೦೦ ಮೌಲ್ಯದ ಒಂದು ದ್ವಿಚಕ್ರ ವಾಹನ ಹಾಗೂ ರೂ ೬,೦೦,೦೦೦ ಮೌಲ್ಯದ ಒಂದು ಕಂಟೈನರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಗಳಾದ ನಿಸಾರ್ ಅಹಮದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆ ಉಪ ಚುನಾವಣೆಯನ್ನು ಕಾನೂನು ಸುವ್ಯವಸ್ಥೆ ಕಾಪಾಡಿ ಶಾಂತಿಯುತ ಮತ್ತು ಮುಕ್ತವಾಗಿ ಜರುಗಿಸುವ ನಿಟ್ಟಿನಲ್ಲಿ ಬೆಳಗಾವಿ ಅಬಕಾರಿ ಜಿಲ್ಲೆ (ದಕ್ಷಿಣ) ವ್ಯಾಪ್ತಿಯಲ್ಲಿ ಜಾರಿ ಮತ್ತು ತನಿಖಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಚುರುಕುಗೊಳಿಸಲಾಗಿದೆ ಎಂದು ಬೆಳಗಾವಿ ಅಬಕಾರಿ ಉಪಾಯುಕ್ತರು ತಿಳಿಸಿದ್ದಾರೆ.
ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ ವಲಯ ಮಟ್ಟದಲ್ಲಿ ರಚಿಸಲಾದ ಅಬಕಾರಿ ನಿರೀಕ್ಷಕರ ನೇತೃತ್ವದ ತಂಡದ ವಿವರ ಇಂತಿದೆ:
ಬೆಳಗಾವಿ ವಲಯ-೧: ಲಿಂಗರಾಜ್ ಕೆ. (ಮೊ.೯೭೪೦೭೭೦೪೧೪), ಬೆಳಗಾವಿ ವಲಯ-೨: ಮಂಜುನಾಥ ಮಳ್ಳಿಗೇರಿ, ಅಬಕಾರಿ ನಿರೀಕ್ಷಕರು (೮೨೭೭೩೬೫೮೩೩), ಬೆಳಗಾವಿ ವಲಯ-೩: ಮಹೇಶ ಪರೀಟ, ಅಬಕಾರಿ ನಿರೀಕ್ಷಕರು (೯೯೦೨೦೨೧೯೩೪), ಖಾನಾಪುರ ವಲಯ: ದಾವಲಸಾಬ ಶಿಂದೋಗಿ(೯೦೭೧೧೨೭೦೮೬), ಬೈಲಹೊಂಗಲ ವಲಯ: ಬಸವರಾಜ ಮುಡಶಿ (೯೨೪೧೭೬೭೬೬೭), ಸವದತ್ತಿ ವಲಯ: ಶ್ರೀಶೈಲ ಅಕ್ಕಿ (೯೯೬೪೧೯೨೦೧೦), ರಾಮದುರ್ಗ ವಲಯ ಬಸವರಾಜ ಕಿತ್ತೂರ(೯೫೩೮೬೦೮೬೪೧).
ಗೋವಾ ಮತ್ತು ಮಹಾರಾಷ್ಟ್ರ ಸಂತ್ರಾ, ಮದ್ಯ ದೇಶಿದಾರುಗಳ ನುಸುಳುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ, ರಸ್ತೆಗಸ್ತು ಮತ್ತು ರಸ್ತೆಗಾವಲು ಮಾಡಲು ಕಾರ್ಯತಂತ್ರ ರೂಪಿಸಲಾಗಿದೆ. ಅದರಂತೆ ಅಂತರ ಜಿಲ್ಲಾ ಧಾರವಾಡ, ಬಾಗಲಕೋಟ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಅಕ್ರಮ ಮದ್ಯ ಸಾಗಾಣಿಕೆ ತಡೆಗಟ್ಟಲು ಗಸ್ತು ಕಾರ್ಯ ನಿರ್ವಹಿಸಲು ವಿಶೇಷ ತಂಡಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಬೆಳಗಾವಿ ಜಿಲ್ಲೆ (ದಕ್ಷಿಣ) ವ್ಯಾಪ್ತಿಯಲ್ಲಿ ಈ ಕೆಳಕಂಡ ಒಟ್ಟು ೪ ಮೆಥನಾಲ್ ಬಳಕೆಯ ಘಟಕಗಳಿದ್ದು, ಅವುಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಬೆಳಗಾವಿ ವಿಭಾಗದ ಎಲ್ಲ ಅಬಕಾರಿ ನಿರೀಕ್ಷಕರು ಮತ್ತು ಉಪ ನಿರೀಕ್ಷಕರಿಗೆ ಸರದಿಯ ಮೇಲೆ ಬೆಳಗಾವಿ ವಿಭಾಗದ ನಿಪ್ಪಾಣಿ ತನಿಖಾ ಠಾಣೆಯಿಂದ ಹಾಯ್ದುಹೋಗುವ ಎಲ್ಲ ಮದ್ಯ/ಮದ್ಯಸಾರ/ಮೆಥನಾಲ್‌ಗಳ ವಾಹನಗಳಿಗೆ ಬೆಂಗಾವಲು ವ್ಯವಸ್ಥೆ ಕಲ್ಪಿಸಿ, ಯಾವುದೇ ದುರುಪಯೋಗವಾಗದಂತೆ ಕ್ರಮ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ (ದಕ್ಷಿಣ) ವ್ಯಾಪ್ತಿಯ ಎಲ್ಲ ಸನ್ನದುಗಳ ಅಂಗಡಿಗಳನ್ನು ತಪಾಸಣೆ ಒಳಪಡಿಸಿ ಮದ್ಯ ಎತ್ತುವಳಿ, ಮಾರಾಟದ ಮೇಲೆ ನಿಗಾವಹಿಸಲಾಗುತ್ತಿದೆ. ಹಾಗೂ ಸನ್ನದು ನಿಯಮ ಉಲ್ಲಂಘನೆ ಇತ್ಯಾದಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು ಬೆಳಗಾವಿ ೧ನೇ ವಲಯದಲ್ಲಿ -೬೪, ವಲಯ ೨ ರಲ್ಲಿ -೬೪, ವಲಯ ೩ರಲ್ಲಿ- ೪೬, ಬೈಲಹೊಂಗಲ ವಲಯದಲ್ಲಿ -೪೭, ಸವದತ್ತಿ-ಯಲ್ಲಿ- ೪೯, ರಾಮದುರ್ಗ- ೩೧ ಸೇರಿದಂತೆ ಒಟ್ಟು ೧೨೮ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆ (ದಕ್ಷಿಣ) ವ್ಯಾಪ್ತಿಯಲ್ಲಿ ಪ್ರಸ್ತುತ ಅಕ್ರಮ ಮದ್ಯ ತಯಾರಿಕೆ ಚಟುವಟಿಕೆಯಲ್ಲಿರುವ ಹುಲ್ಯಾನೂರ, ಬುಡ್ರಾನೂರ, ಮುತ್ತ್ಯಾನಟ್ಟಿ, ಗ್ಯಾಂಗವಾಡಿ, ಬಡಸ, ಅರೆಬೆಂಚಿ ತಾಂಡಾ, ಬಡ್ಲಿ ತಾಂಡಾ ಮತ್ತು ವಿಚಕ್ಷಣೆಯಲ್ಲಿರುವ ವಾಲ್ಮೀಕಿನಗರ-ಕಾಟಗಾಳಿ ಅರಣ್ಯ ಪ್ರದೇಶ ಮತ್ತು ಹೋಗರ್ತಿ ಅರಣ್ಯ ಪ್ರದೇಶಗಳ ಕಳ್ಳಬಟ್ಟಿ ಕೇಂದ್ರಗಳ ಮೇಲೆ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ತಂಡಗಳನ್ನು ರಚಿಸಿದೆ ಎಂದು ಅವರು ತಿಳಿಸಿದ್ದಾರೆ.
ಹಳೆ ೪೬ ಕಳ್ಳಬಟ್ಟಿ ಸಾರಾಯಿ ಹಾಗೂ ೧೧ ಅಕ್ರಮ ಮದ್ಯ ಸಾಗಾಣಿಕೆ ಆರೋಪಿಗಳ ಇತ್ತೀಚಿನ ಚಲನ-ವಲನಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು. ಪೊಲೀಸ್/ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಆರೋಪಿಗಳ ಮೇಲೆ ನಿಗಾವಹಿಸಿ, ಇತ್ತೀಚಿನ ಚಲನ-ವಲನಗಳ ವಿವರಗಳನ್ನು ಡೋಸಿಯರ‍್ಸ್‌ನಲ್ಲಿ ಸಂಗ್ರಹಿಸಲು ೩ ತಂಡಗಳನ್ನು ರಚಿಸಲಾಗಿದೆ.
ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟ ಕೇಂದ್ರಗಳನ್ನು ಸಂಪೂರ್ಣ ತಡೆಗಟ್ಟುವ ದಿಸೆಯಲ್ಲಿ ಕಾರ್ಯ ವ್ಯಾಪ್ತಿಯಲ್ಲಿನ ಮೂರು ಅಥವಾ ಮೂರಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗಡಿಪಾರು ಮಾಡುವುದಲ್ಲದೆ ೧೯೮೫ ರ ಅನ್ವಯ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣೆ ನೀತಿ ಸಂಹಿತೆ ಇದ್ದ ಪ್ರಯುಕ್ತ ಢಾಬಾ/ಮಾಂಸಾಹಾರಿ ಹೋಟೆಲ್ ಹಾಗೂ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯದಂತೆ ಕ್ರಮ ವಹಿಸಲಾಗಿದೆ. ಈ ಬಗ್ಗೆ ಕ್ರಮ ವಹಿಸಲು ಉಪ ವಿಭಾಗಗಳ ಅಬಕಾರಿ ಉಪ ಅಕ್ಷಕರು ಮತ್ತು ವಲಯಗಳ ಅಬಕಾರಿ ನಿರೀಕ್ಷಕರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ