*ರಸ್ತೆಯ ಬದಿ ನಿಂತಿದ್ದ ಕಂಟೇನರ್ ಗೆ ಕಾರು ಡಿಕ್ಕಿ: ಭೀಕರ ಅಪಘಾತದಲ್ಲಿ ಬಾಲಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ರಸ್ತೆಬದಿ ನಿಂತಿದ್ದ ಕಂಟೇನರ್ ಗೆ ಕಾರು ಡಿಕ್ಕಿಯಾಗಿದ್ದು, ಭೀಕರ ಅಪಘಾತದಲ್ಲಿ 12 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ರಸ್ತೆಯಲ್ಲಿನ ವೈಟ್ ಹೌಸ್ ಹೋಟೆಲ್ ಬಳಿ ಈ ದುರಂತ ಸಂಭವಿಸುದೆ. ಅಪಘಾತದಲ್ಲಿ ಕಾರಿನಲ್ಲಿದ್ದ 12 ವರ್ಷದ ಬಾಲಕ ಸಿದ್ಧಾರ್ಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾಲಕನ ತಂದೆ ಬಾಲಕೃಷ್ಣ ತಾವದಾರೆ, ಸೌರಭ ಬಾಗಿ, ನಾರಾಯಣ ಯಾದವ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಾಲಕೃಷ್ಣ ತಾವದಾರೆ ತಮ್ಮ ಮಗ ಸಿದ್ಧಾರ್ಥ್ ಹಾಗೂ ಇತರರು ಟಾಟಾ ಇಂಡಿಕಾ ವಿಸ್ಟಾ ಕಾರಿನಲ್ಲಿ ಪರಿಚಯಸ್ಥರೊಬ್ಬರ ಹೋಟೆಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಈ ವೇಳೆ ಮುಂದೆ ಚಲಿಸುತ್ತಿದ್ದ ವಾಹನಗಳನ್ನು ಓವರ್ ಟೇಕ್ ಮಾಡಲು ಹೋಗಿ ಕಾರು ರಸ್ತೆ ಬದಿ ನಿಂತಿದ್ದ ಕಂಟೇನರ್ ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬಾಲಕೃಷ್ಣ ಅವರ ಮಗ 12 ವರ್ಷದ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕಾರು ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆ ಘಟನೆಗೆ ಕಾರಣ ಎನ್ನಾಲಾಗಿದೆ. ನಿಪ್ಪಾಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




