Kannada NewsKarnataka NewsLatest

*ನುಡಿದು ತೋರುವದಕ್ಕಿಂತ ನಡೆದು ತೋರಿಸಿ: ಹುಕ್ಕೇರಿ ಶ್ರೀ*

ಪ್ರಗತಿವಾಹಿನಿ ಸುದ್ದಿ: ನುಡಿದು ತೋರುವದಕ್ಕಿಂತ ನಡೆದು ತೋರಿಸಿದರೆ ಪರಿಣಾಮ ಹೆಚ್ಚು ಎಂದು ಬೆಳಗಾವಿಯ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಪ.ಪೂ. ಡಾ|| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ತಾಲೂಕಿನ ಜಡ್ಡಿಗದ್ದೆಯ ಮಂಡಲ ವ್ಯಾಪ್ತಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಆಶ್ರಯದಲ್ಲಿ ಭಾನುವಾರ ನಡೆದ ಬೃಹತ್ ‘ಹಿಂದೂ ಸಮಾವೇಶ’ದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.

Related Articles
Home add -Advt


ನಾಲಗೆ ಒಂದು. ಕಾಲುಗಳು ಎರಡು. ಒಂದು ನುಡಿದರೆ ಎರಡರಷ್ಟು ನಡೆದು ತೋರಿಸಬೇಕು.ಹಿಂದುಗಳನ್ನು ಹತ್ತಿರದಿಂದ ಪ್ರೀತಿಸಬೇಕು ಎಂದರು.


ಹಿಂದುತ್ವ ಗಟ್ಟಿಗೊಳಿಸಿಕೊಳ್ಳಲು ಹಿಂದೂ ಸಮಾವೇಶ ಬೇಕು. ನಾವು ಹಿಂದೂ ಎಂದು ಹೇಳಲು ಯಾರೂ ಹಿಂಜರಿಯಬಾರದು. ಅಭಿಮಾನದಿಂದ ಹಿಂದೂ ಎಂದು ಹೇಳಬೇಕು ಎಂದ ಶ್ರೀಗಳು, ಹಿಂದೂ ಸಮಾವೇಶ ನಿತ್ಯವೂ ಆಗಬೇಕು. ಹೋದಲೆಲ್ಲ ನಾಲ್ಕು ಜನ ಸೇರಿದಲ್ಲಿ ಸಂಸ್ಕೃತಿ, ದೇಶದ ಬಗ್ಗೆ ಮಾತನಾಡಬೇಕು ಎಂದರು.


ಹಿಂದುಗಳ ಹೊಸ ವರ್ಷ ಯುಗಾದಿ ದಿನದಂದು ಎಲ್ಲ ಹಿಂದುಗಳ‌ ಮನೆಗೆ ತೆರಳಿ ಬೇವು ಬೆಲ್ಲ ಕೊಟ್ಟು ಪ್ರೀತಿಯಿಂದ ಜೊತೆ ಮಾತಾಡಿದರೆ ಅವರು ಎಂದೂ ಎಂಥ ವೇಳೆಯೂ ಮತಾಂತರ ಆಗುವದಿಲ್ಲ‌ ಎಂದ ಶ್ರೀಗಳು, ಎತ್ತರದಿಂದ‌ ಇರುವದು ಬಿಟ್ಟು ಹತ್ತಿರದಿಂದ ಇರಬೇಕು ಎಂದರು‌.
ಹಿಂದುಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಬೆಳೆಸಿದರೆ ಹಿಂದುತ್ವ ದೇಶ ಉಳಿಯುತ್ತದೆ ಎಂದರು.


ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿದ ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಸಂಚಾಲಕ ಸೂರ್ಯನಾರಾಯಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹುಟ್ಟು, ಬೆಳವಣಿಗೆ, ಅಂದಿನ ಅವಶ್ಯಕತೆ, ಕಾರ್ಯ ವಿಸ್ತಾರ ತಿಳಿಸಿ, ಮುಂದಿನ ಪೀಳಿಗೆ ಹಿಂದುತ್ವದ ಜಾಗೃತಿ‌ ಕಾರ್ಯ ಇಂತಹ‌ ಸಮಾವೇಶ ಮಾಡುತ್ತದೆ. ನಿಸ್ವಾರ್ಥ ಸಮಾವೇಶ ಹಿಂದೂ ಸಮಾವೇಶ ಎಂದರು.


ಭಾರತ ಕಾನೂನು ಬದಲಾಗದೇ ಹೋದರೆ, ಹಿಂದುಗಳು‌ ಜಾಗೃತ ಆಗದೇ ಇದ್ದರೆ‌ ಮುಂದೆ ಅಪಾಯಕಾದಿದೆ. ದೇಶ ಉಳಿಯಬೇಕಾದರೆ ದೇಶ ಪ್ರೀತಿಸುವ ಜನ ಇರಬೇಕು ಎಂದರು.

ಈ ವೇಳೆ ​ಜಡ್ಡಿಗದ್ದೆ ಮಂಡಲದ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಶಿವರಾಮ ನಾ. ಭಟ್ಟ, ಹೊಸ್ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಗ್ರಾಮದ ಪ್ರಮುಖರಾಗಿ ಗಿರಿಜಾ ಹೆಗಡೆ ಹಾಗೂ ರತ್ನಾವತಿ ನಾಯ್ಕ ಉಪಸ್ಥಿತರಿದ್ದರು.


ಸೀಮಾ ವೈದಿಕ ಪರಿಷತ್ ಪ್ರಮುಖರು ವೇದಘೋಷ‌ ಮಾಡಿದರು.ಶಿವರಾಮ ಭಟ್ಟ ಪ್ರಕಾಶ ಪೂಜಾರಿ, ನಾರಾಯಣ ಭಟ್ಟ, ಮಂಜು ಪೂಜಾರಿ ಶ್ರೀಗಳಿಗೆ ಫಲ‌ಸಮರ್ಪಣೆ ಮಾಡಿದರು. ರಾಘವೇಂದ್ರ ಹೆಗಡೆ ಮೆಣಸಿ ಸೀಮೆಯ ವಿಶೇಷ ಕಾಳುಮೆಣಸು ನೀಡಿದರು. ಭಾಗವತ ತುಳಗೇರಿ ಗಜಾನನ ಭಟ್ಟ ಪ್ರಾರ್ಥಿಸಿದರು‌. ಭಗವದ್ಗೀತೆಯ ಪಠಣ ಕೂಡ ನಡೆಯಿತು. ಶಿವರಾಮ ಭಟ್ ಸ್ವಾಗತಿಸಿದರು. ಪ್ರವೀಣ ಮಣ್ಮನೆ ಪ್ರಾಸ್ತಾವಿಕ‌ ಮಾತನಾಡಿದರು. ಪಿ.ಜಿ.ಹೆಗಡೆ ನಿರ್ವಹಿಸಿದರು. ಚೈತ್ರ ಭಟ್ಟ ದೇಶಭಕ್ತಿಗೀತೆ ಹಾಡಿದರು. ಅರವಿಂದ ಹೆಗಡೆ ನಿರ್ಣಯ ಮಂಡಿಸಿದರು. ರಮೇಶ ಪೂಜಾರಿ ವಂದಿಸಿದರು.


ಕಾರ್ಯಕ್ರಮದ ಅಂಗವಾಗಿ ಜಡ್ಡಿಗದ್ದೆಯ ದೇವಸ್ಥಾನದ ಆವರಣದಿಂದ ಸಮಾವೇಶ ನಡೆಯುವ ಸ್ಥಳದವರೆಗೆ ಭಾರತ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಿತು.


ಬಿಜೆಪಿ ಜಿಲ್ಲಾ‌ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಸೇರಿದಂತೆ ಐನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು.

Related Articles

Back to top button