ವಿನೂತನ ಮಹಾತ್ಮ ಫುಲೆ ಉದ್ಯಾನವನ ಲೋಕಾರ್ಪಣೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶೇಷ ಚೇತನ ಮಕ್ಕಳು ದೇವರ ಸ್ವರೂಪ. ಅವರಿಗೆ ಅನುಕೂಲವಾಗುವಂತೆ ಮಹಾತ್ಮಾ ಫುಲೆ ಉದ್ಯಾನವನ ಹಾಗೂ ಥೆರಪಿ ಕೇಂದ್ರವನ್ನು ಕೂಡ ನಿರ್ಮಿಸಲಾಗಿದೆ. ಎಲ್ಲಾ ವಿಶೇಷ ಚೇತನ ಮಕ್ಕಳಿಗೆ ಇದರ ಪ್ರಯೋಜನ ಲಭಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಬೆಳಗಾವಿಯ ಟಿಳಕವಾಡಿಯಲ್ಲಿ ವಿಶೇಷಚೇತನ ಮಕ್ಕಳಿಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿನೂತನವಾಗಿ ನಿರ್ಮಿಸಲಾಗಿರುವ ಮಹಾತ್ಮ ಫುಲೆ ಉದ್ಯಾನವನ್ನು ಭಾನುವಾರ (ಸೆ.26) ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ದೇಶದಲ್ಲಿ ಪ್ರಥಮವಾಗಿ ವಿಶೇಷ ಚೇತನ ಮಕ್ಕಳಿಗಾಗಿ ಉದ್ಯಾನ ನಿರ್ಮಿಸಿರುವುದು ಹೆಮ್ಮೆಪಡುವ ವಿಷಯವಾಗಿದೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರ ಈ ಕಾರ್ಯ ಶ್ಲಾಘನೀಯ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷ ಚೇತನ ಮಕ್ಕಳಲ್ಲಿ ಏನೇ ನ್ಯೂನತೆ ಇದ್ದರೂ ಅವರಿಗೆ ಪ್ರೀತಿ- ಕಾಳಜಿ ತೋರುವ ಮೂಲಕ ಅವರ ನ್ಯೂನ್ಯತೆಯನ್ನು ಸರಿಪಡಿಸಲು ನಾವೆಲ್ಲ ಪ್ರಯತ್ನಿಸೋಣ. ಈ ನಿಟ್ಟಿನಲ್ಲಿ ಸಮಾಜದ ಸಹಕಾರ ಕೂಡ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಸಚಿವರಾದ ಉಮೇಶ್ ಕತ್ತಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಅಭಯ್ ಪಾಟೀಲ, ಮಹಾದೇವಪ್ಪ ಯಾದವಾಡ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ