Kannada NewsLatest

ಕೀಳು ಮಟ್ಟದ ಹೇಳಿಕೆ: ರಾಜ್ಯದ ಹಲವೆಡೆ ಸಂಜಯ ಪಾಟೀಲ ವಿರುದ್ಧ ಪ್ರತಿಭಟನೆ

 

 

ಮಾಜಿ ಶಾಸಕ, ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ವಿರುದ್ದ ಸಿಡಿದೆದ್ದ ಕಾಂಗ್ರೆಸ್ಸಿಗರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದು, ಸಂಜಯ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದು, ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿ ರಸ್ತೆಯಲ್ಲಿ ಮಲಗಿ, ಬಾಯಿಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜಯ ಪಾಟೀಲ ಅ ರ ಗೊಮಟೇಶ ವಿದ್ಯಾಪೀಠಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಮಹಿಳೆಯರಿಗೆ ಪೊಲೀಸರು ತಡೆ ಒಡ್ಡಿದರು. ರಸ್ತೆಯಲ್ಲೇ ಕುಳಿತು ಘೋಷಣೆಗಳನ್ನು ಕೂಗಿದ ಮಹಿಳೆಯರು, ಸಂಜಯ ಪಾಟೀಲ ಹಾಗೂ ಬಿಜೆಪಿ ಸಂಸ್ಕೃತಿ ಕುರಿತು ಕಿಡಿಕಾರಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಂಜಯ್ ಪಾಟೀಲ್ ಅವರ ಹೇಳಿಕೆಗೆ ಈಗಾಗಲೇ ರಾಜ್ಯಾದ್ಯಂತ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನನ್ನ ವಿರುದ್ಧ ಹೇಳಿಕೆ ನೀಡುವ ಮೊದಲು ತಮ್ಮನ್ನು ತಾವು ವಿಮರ್ಷೆ ಮಾಡಿಕೊಳ್ಳಲಿ ಎಂದಿದ್ದಾರೆ.

ಸಂಜಯ್ ಅಣ್ಣನಿಗೆ ಹೆಂಡಂದಿರಿದ್ದಾರೆ, ಮಗಳಿದ್ದಾಳೆ, ತಾಯಿ, ಸಹೋದರಿಯರೂ ಇದ್ದಾರೆ… ಹೀಗಾಗಿ ಇಂಥ ಕೀಳು ಮಟ್ಟದ ಹೇಳಿಕೆಯನ್ನು ನೀವು ಯಾರ ವಿರುದ್ಧ ನೀಡಿದ್ದೀರಿ? ಎಂಬುದನ್ನು ನಿಮ್ಮನ್ನೇ ನೀವು ವಿಮರ್ಷೆ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು.

ಸಂಜಯ್ ಪಾಟೀಲ್ ಅವರು ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಹೇಳಿಕೆ ನೀಡಿದ್ದಾರಾ? ಅಥವಾ ವೈಯಕ್ತಿಕವಾಗಿ ಹೇಳಿಕೆ ನೀಡಿದ್ದಾರಾ ಎಂಬುದನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರು ಸ್ಪಷ್ಟ ಪಡಿಸಲಿ. ಇದು ನಿಮ್ಮ ಪಕ್ಷದ ಶಿಸ್ತು, ಸಂಸ್ಕೃತಿಯೇ? ಎಂದು ಪ್ರಶ್ನಿಸಿದ್ದಾರೆ.

ಭಾರತದ ಸಂಸ್ಕೃತಿಯಲ್ಲಿ ಯಾರ್ಯಾರು ಯಾವ್ಯಾವಾಗ ಹೆಣ್ಣನ್ನು ಕೆದಕಿದ್ದಾರೆ, ಹೆಣ್ಣಿಗೆ ನೋವುಂಟು ಮಾಡಿದ್ದಾರೆ ಅಂತವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಬಿಜೆಪಿ ನಾಯಕರು ಇತಿಹಾಸದ ಪುಟಗಳನ್ನು ತೆಗೆದು ನೋಡಲಿ. ಇಂತ ಸಂದರ್ಭದಲ್ಲಿ ನಾನು ಯಾರ ಮೇಲೂ ಚಾಲೇಂಜ್ ಮಾಡಲ್ಲ, ಹಾಗಂತ ಸುಮ್ಮನೇ ಕುಳಿತುಕೊಳ್ಳುವುದೂ ಇಲ್ಲ. ನಾನು ಜನರ ಆಶಿರ್ವಾದದಿಂದ ಗೆದ್ದು ಶಾಸಕಿಯಾಗಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಲಕ್ಷ್ಮಿ ಹೆಬ್ಬಾಳ್ಕರ್ ರಾತ್ರಿ ರಾಜಕಾರಣದಿಂದ ಗೆದ್ದು ಶಾಸಕಿಯಾಗಿದ್ದಾರೆ, ಬಿಜೆಪಿಯಲ್ಲಿ ಇಂತಹ ಸಂಸ್ಕೃತಿ ಇಲ್ಲ ಆದರೆ ನಮ್ಮ ಮೇಲೆ ಅಂತ ಆರೋಪ ಮಾಡಲು ಹೊರಟಿದ್ದಾರೆ ಎಂದು ಹೇಳುವ ಮೂಲಕ ಸಂಜಯ್ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದರು. ಮಾಜಿ ಶಾಸಕರ ಕೀಳುಮಟ್ಟದ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನಲ್ಲೂ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

ಬೆಳಗಾವಿ ಜಿಲ್ಲೆಯ ತಾರಿಹಾಳ, ಸವದತ್ತಿ, ಸಂಕೇಶ್ವರ ಸೇರಿದಂತೆ ಹಲವೆಡೆ ಭಾರಿ ಪ್ರತಿಭಟನೆಗಳು ನಡೆದಿವೆ.

ನಾಲಿಗೆ ಹರಿಬಿಟ್ಟ ಮಾಜಿ ಶಾಸಕ; ಬಿಜೆಪಿ ಹಾಗೂ ಗ್ರಾಮೀಣ ಮತದಾರರಿಗೆ ಅವಮಾನ: ಕಾಂಗ್ರೆಸ್ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button