Kannada NewsLatest

ಬೆಳಗಾವಿಯಲ್ಲಿ 6,72,232 ಜನರಿಗೆ ಲಸಿಕೆ; 10,464 ಸಕ್ರಿಯ ಪ್ರಕರಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲೆಯಲ್ಲಿ ಸಮರ್ಪಕವಾಗಿ ಅಶ್ಯಕತೆಗನುಸಾರವಾಗಿ ಆಸ್ಪತ್ರೆಗಳಿಗೆ ಆಕ್ಷಿಜನ್ ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 15 ಕೆ.ಎಲ್. ಆಕ್ಷಿಜನ್ ಪೂರೈಕೆಯಾಗುತ್ತಿತ್ತು. ಈಗ ಸರ್ಕಾರದಿಂದ 22 ಕೆ.ಎಲ್. ಆಕ್ಷಿಜನ್ ಹಂಚಿಕೆಯಾಗಿದೆ. ಸ್ಥಳೀಯವಾಗಿ 3 ಸಂಸ್ಥೆಗಳಿಂದ 5 ಕೆ.ಎಲ್. ತಯಾರಿಕೆಯಾಗಿ ಕ್ರಮ ಬದ್ಧವಾಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಕೋವಿಡ್ -19 ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ (ಮೇ.16) ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಕೇಂದ್ರದಲ್ಲಿ 1 ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಒಂದರಂತೆ ಕೋವಿಡ್ ವಾರ್ ರೂಂ ಸ್ಥಾಪಿಸಲಾಗಿದೆ. ಅಲ್ಲಿ ಹೊಂ ಐಸೂಲೇಶನ್‌ದಲ್ಲಿ ಇರುವ ಸೋಂಕಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ವಿಚಾರಿಸಲಾಗುತ್ತಿದೆ. ಇವರಿಗೆ ಸಂಬಂಧಪಟ್ಟ ಪ್ರಥಮ ಸಂಪರ್ಕಿತರನ್ನು ಹೋಮ್ ಕ್ವಾರಂಟೈನ ಇರುವುದರ ಬಗ್ಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಲಭ್ಯವಿರುವ ಬೆಡ್ ಗಳ ವಿವರಗಳನ್ನು ಪಡೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಅಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ಎಲ್ಲ ತಾಲೂಕಗಳಲ್ಲಿ ಒಟ್ಟು 25 ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಕೊವಿಡ್ ಕೇರ್ ಸೆಂಟರ್‌ಗಳಲ್ಲಿ ಒಟ್ಟು 66 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹಾಸ್ಟೇಲ್, ಯಾತ್ರಿ ನಿವಾಸ ಹಾಗೂ ಕಾಲೇಜು ಇವುಗಳಲ್ಲಿ ಒಟ್ಟು 980 ಹಾಸಿಗೆಗಳು ಲಭ್ಯವಿರುತ್ತವೆ. ಹಾಗೂ ಸರ್ಕಾರದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 320 ಹಾಸಿಗೆಗಳು ಲಭ್ಯವಿರುತ್ತವೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲಸಿಕೆ ಪೂರೈಕೆ:

ಲಸಿಕಾಕರಣದ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಗೆ 38,77,504 ಗುರಿ ನೀಡಲಾಗಿದೆ. ಇದರಲ್ಲಿ ಇಲ್ಲಿಯವರೆಗೆ 6,72,232 ಜನರಿಗೆ ಲಸಿಕೆ ನೀಡಲಾಗಿದೆ. 5,44,589 ಜನ ಮೊದಲನೇಯ ಡೋಸ್ ಪಡೆದುಕೊಂಡಿದ್ದಾರೆ. ಎರಡನೇಯ ಡೋಸ್ ಪಡೆದವರ ಸಂಖ್ಯೆ 1,27,643 ಆಗಿದೆ. 4,16,946 ಜನ ಎರಡನೇಯ ಡೋಸ್ ಪಡೆಯಬೇಕಾಗಿದೆ‌ ಎಂದು ತಿಳಿಸಿದರು.

ಕೇಂದ್ರದಿಂದ 1,190 ವಯಲ್ ಹಾಗೂ ರಾಜ್ಯದಿಂದ 2,480 ವಯಲ್ ಕೋವ್ಯಾಕ್ಸಿನ ಲಸಿಕೆ ಪೂರೈಕೆಯಾಗಿದ್ದು, ಒಟ್ಟು 3,670 ವಯಲ್ ಲಸಿಕೆ ಪೂರೈಕೆ ಆಗಿದೆ. ಅದೇ ರೀತಿ, ಕೇಂದ್ರದಿಂದ 9,080 ವಯಲ್ ಹಾಗೂ ರಾಜ್ಯದಿಂದ 12,560 ವಯಲ್ ಗಳಷ್ಟು ಕೋವಿಶಿಲ್ಡ ಲಸಿಕೆ ಪೂರೈಕೆ ಯಾಗಿದ್ದು, ಒಟ್ಟು 21,640 ವಯಲ್ ಕೋವಿಶಿಲ್ಡ ಲಸಿಕೆ ಪೂರೈಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಾಹಿತಿ ನೀಡಿದರು.

18 ರಿಂದ 44 ವಯಸ್ಸಿನವರ ಗುರಿ 22,95,518 ಇದರಲ್ಲಿ 4,125 ಲಸಿಕೆ ನೀಡಲಾಗಿದೆ.ಈ ಲಸಿಕಾಕರಣವನ್ನು ಮೇ.11 ರಿಂದ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೆಮಡಿಸಿವರ್ ಗಳ ಪೂರೈಕೆ :

ಇದೇ ಸಂದರ್ಭದಲ್ಲಿ , ರೆಮಡಿಸಿವರ್ ಪೂರೈಕೆಯ ಬಗ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿ, ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಏ.1ರಿಂದ ಮೇ.15 ರ ವರೆಗೆ 12,902 ರೆಮಡಿಸಿವರ್‌ ವಯಲ್‌ಗಳು ಪೂರೈಕೆಯಾಗಿರುತ್ತವೆ. ಇವುಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಒಟ್ಟು 12,750 ವಯಲ್‌ಗಳನ್ನು ನೀಡಲಾಗಿದೆ. ಸದ್ಯ 152 ವಯಲ್‌ಗಳು ಜಿಲ್ಲಾ ಉಗ್ರಾಣದಲ್ಲಿ ಲಭ್ಯವಿರುತ್ತವೆ. ಅದೇ ರೀತಿ, ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಏ.1 ರಿಂದ ಮೇ.15 ರ ವರೆಗೆ 12,561 ರೆಮಡಿಸಿವರ್‌ ವಯಲ್‌ಗಳು ಪೂರೈಕೆಯಾಗಿರುತ್ತವೆ.

ರೆಮಿಡಿಸಿವಿರ್ ಗಾಗಿ ಆಸ್ಪತ್ರೆಯವರು ವೆಬ್ ಸೈಟ್ ಮೂಲಕ ನೋಂದಣಿ ಮಾಡಿದಾಗ ನೇರವಾಗಿ ಆಯಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ರೆಮಿಡಿಸಿವಿರ್ ಹಂಚಿಕೆ ಅನುಸಾರ ಸಮರ್ಪಕವಾಗಿ ಹಂಚಿಕೆ ಮಾಡಲಾಗುತ್ತಿದೆ. ಎಲ್ಲರಿಗೂ ರೆಮಿಡಿಸಿವಿರ್ ಅಗತ್ಯವಿರುವುದಿಲ್ಲ; ವೈದ್ಯರ ಸಲಹೆ ಮೇರೆಗೆ ಮಾತ್ರ ನೀಡಲಾಗುವುದು ಎಂದು ತಿಳಿಸಿದರು.

ಕೋವಿಡ್ -19 ಕುರಿತು ಅಂಕಿ ಅಂಶಗಳ ಮಾಹಿತಿ :

ಇನ್ನು, ಕೋವಿಡ್ -19 ಕುರಿತು ಅಂಕಿ ಅಂಶಗಳ‌ ಮಾಹಿತಿಯನ್ನು ನೀಡುತ್ತಾ, ಮಾ.17 ರಿಂದ ಮೇ.15ರ ವರೆಗೆ ಜಿಲ್ಲೆಯಲ್ಲಿ ಸಂಗ್ರಹಿಸಲಾದ ಒಟ್ಟು 1,82,740 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. 17,982 ಜನರಲ್ಲಿ ಸೊಂಕು ದೃಢ (ಪಾಸಿಟಿವ್ )ಪಟ್ಟಿದೆ. 7,580 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, 10,464 ಸಕ್ರಿಯವಾಗಿರುವ ಪ್ರಕರಣಗಳಿವೆ. ಹೊಂ ಐಸೊಲೇಶನ್‌ದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 8,320 ಆಗಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 2,144 ಆಗಿದೆ‌ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಕೋವಿಡ್ ಕಾರಣದಿಂದಾಗಿ 47 ಜನ ಮರಣ ಹೊಂದಿದ್ದಾರೆ. ಅಲ್ಲದೇ, ಸಕಾರಾತ್ಮಕ ಪ್ರಕರಣ ಶೇಕಡಾವಾರು (ಪಾಸಿಟಿವಿಟಿ ರೇಟ್) ಕಳೆದ 10 ದಿವಸದಿಂದ 38.43% ಆಗಿದೆ. ಗುಣಮುಖರಾದವರ ಪ್ರಮಾಣ ಶೇಕಡಾವಾರು 75.91% ಆಗಿದ್ದು, ಮರಣ ಪ್ರಮಾಣ ಶೇಕಡಾವಾರು (ಕಳೆದ 10 ದಿವಸದಿಂದ) 0.23% ಆಗಿದೆ ಎಂದು ವಿವರಿಸಿದರು.
ಬ್ಲ್ಯಾಕ್ ಫಂಗಸ್ ಸೋಂಕಿತನಿಗೆ ಸಹಾಯ; ಮಾನವೀಯತೆ ಮೆರೆದ ಡಿಸಿಎಂ ಸವದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button