Kannada NewsLatest

ಬೆಳಗಾವಿಯಲ್ಲಿ ಕೋವಿಶಿಲ್ಡ್ ಲಸಿಕಾಕರಣಕ್ಕೆ ಚಾಲನೆ

 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೇಶದ ಬಹುನಿರೀಕ್ಷಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮಕ್ಕೆ ಇಂದು ಬೆಳಗಾವಿ ಜಿಲ್ಲೆಯಲ್ಲೂ ಚಾಲನೆ ದೊರೆತಿದೆ.

ನಗರದಲ್ಲಿ ಇರುವ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಹಾಗೂ ಕೆ.ಎಲ್.ಇ. ಆಸ್ಪತ್ರೆ ಸೇರಿದಂತೆ ಒಟ್ಟು ಹದಿಮೂರು ಕಡೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಈಗಾಗಲೇ ಗುರುತಿಸಲಾಗಿರುವ ಆಯ್ದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ.

ಅಥಣಿಯ ತಾಲ್ಲೂಕು ಆಸ್ಪತ್ರೆಯಲ್ಲಿ ಆರಂಭಗೊಂಡಿರುವ ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಖುದ್ದಾಗಿ ಪರಿಶೀಲಿಸಿದರು.

ಅಥಣಿ ತಾಲ್ಲೂಕು ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಗೆ ಲಸಿಕೆ ಹಾಕುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಿರೇಮಠ ಅವರು ಚಪ್ಪಾಳೆ ತಟ್ಟುವ ಮೂಲಕ ಲಸಿಕಾಕಾರಣಕ್ಕೆ ಚಾಲನೆ ನೀಡಿ ಸಂತಸ ವ್ಯಕ್ತಪಡಿಸಿದರು.

ಕೋವಿಡ್ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ನೀಡಿರುವ ಸಲಹೆ-ಸೂಚನೆಗಳನ್ನು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಮ್ಸ್, ಕೆ.ಎಲ್.ಇ. ಆಸ್ಪತ್ರೆ ಆಸ್ಪತ್ರೆ ಸೇರಿದಂತೆ ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಖಾನಾಪುರ, ರಾಯಬಾಗ, ರಾಮದುರ್ಗ, ಸವದತ್ತಿ, ಕೊಣ್ಣೂರ(ತಾ-ಗೋಕಾಕ), ವಂಟಮುರಿ(ತಾ-ಬೆಳಗಾವಿ) ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಆಯ್ದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ.

ಹದಿಮೂರು ಆಸ್ಪತ್ರೆಗಳ ಪ್ರತಿ ಕೇಂದ್ರದಲ್ಲೂ ವೈದ್ಯರು, ವೈದ್ಯಕೀಯ ಸಿಬ್ಬಂದಿ, ನರ್ಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಪ್ರತಿದಿನ ನೂರು‌ ಜನರಿಗೆ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಆರ್.ಸಿ.ಎಚ್. ಅಧಿಕಾರಿ ಡಾ.ಐ.ಪಿ.ಗಡಾದ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button