
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿನ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಿ.ಕೆ ಮಾಡೆಲ್ ಶಾಲೆಯ ಸುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಆದರೂ ಜನರು ಕ್ಯಾರೇ ಎನ್ನುತ್ತಿಲ್ಲ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಾಗರೋಪಾದಿಯಲ್ಲಿ ಮತಗಟ್ಟೆಯ ಬಳಿ ಜನರು ನೆರೆದಿದ್ದಾರೆ.
ಬಿ.ಕೆ ಮಾಡೆಲ್ ಶಾಲೆಯ ಸುತ್ತ ಆವರಣದಿಂದ 500 ಮೀಟರ್ ಸುತ್ತಳತೆಯಲ್ಲಿ ಹಾಗೂ ಬೆಳಗಾವಿ ತಾಲ್ಲೂಕಿನಾದ್ಯಂತ ಡಿಸೆಂಬರ್ 30 ರಂದು ಬೆಳಿಗ್ಗೆ 6 ಗಂಟೆಯಿಂದ ದಿನಾಂಕ ಡಿಸೆಂಬರ್ 31 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇದಾಜ್ಞೆ ವಿಧಿಸಿ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್ ಆದೇಶಿಸಿದ್ದಾರೆ. ಶಾಲೆಯ ಸುತ್ತಲಿನ ಆವರಣದಿಂದ 500 ಮೀಟರ್ ವ್ಯಾಪ್ತಿಯಲ್ಲಿ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ (ಸರ್ಕಾರಿ ಸಭೆ-ಸಮಾರಂಭ ಹೊರತುಪಡಿಸಿ) ಸಮಾರಂಭ ಜರುಗಿಸುವುದನ್ನು ನಿಷೇಧಿಸಲಾಗಿದೆ. ಆದರೆ ಸಾರ್ವಜನಿಕರು ಮಾತ್ರ ಆದೇಶಕ್ಕೆ ಕ್ಯಾರೇ ಎನ್ನುತ್ತಿಲ್ಲ. ಗ್ರಾಮಂ ಪಂಚಾಯತಿ ಮತ ಎಣಿಗೆ ಬೆನ್ನಲ್ಲೇ ಗುಂಪು ಗುಂಪಾಗಿ ಜನರು ಮತ ಎಣಿಕೆ ನಡೆಯುತ್ತಿರುವ ಶಾಲಾ ಆವರಣದಲ್ಲಿ ಜಮಾವಣೆ ಗೊಂಡಿದ್ದಾರೆ. ಇನ್ನು ಮಾಸ್ಕ್ ಆಗಲಿ, ಸಾಮಾಜಿಕ ಅಂತರದ ಪಾಲನೆಯಾಗಲಿ ಕಂಡು ಬರುತ್ತಿಲ್ಲ.