*ಭೂಮಿ ವಶಪಡಿಸಿಕೊಂಡು ಪರಿಹಾರ ನೀಡದ ಹಿನ್ನೆಲೆ: ಆರೋಗ್ಯ ಇಲಾಖೆ ಅಧಿಕಾರಿಯ ಕಾರು ಜಪ್ತಿ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕಾಗಿ ೬೦ ವರ್ಷಗಳ ಹಿಂದೆ ಭೂಮಿ ವಶಪಡಿಸಿಕೊಂಡು ಸಂತ್ರಸ್ತರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಕಾರು ಜಪ್ತಿ ಮಾಡಿದ ಘಟನೆ ನಡೆದಿದೆ.
ಹಿರೇಬಾಗೇವಾಡಿ ಗ್ರಾಮದಲ್ಲಿ ೧೮೯೪ರ ಬ್ರಿಟೀಷ್ ಕಾಯ್ದೆ ಅನುಸರಿಸಿ ಫಕೀರಪ್ಪ ದುರ್ಗಪ್ಪ ತಳವಾರ ಅವರ ೩೧ ಗುಂಟೆ, ಮಲ್ಲಿಕಾರ್ಜುನ ತಳವಾರ ಅವರ ೧ ಎಕರೆ ೨ ಗುಂಟೆ, ಅಶೋಕತಾಯಿ ತಳವರ ಅವರ ೩೦ ಗುಂಟೆ ಸರ್ವೆ ನಂಬರ್ ೧೨೫/೨ ಬಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಈವರೆಗೂ ಆರೋಗ್ಯ ಇಲಾಖೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿರಲಿಲ್ಲ. ಕೋರ್ಟ್ ಅನುಮತಿಪಡೆದು ಆರೋಗ್ಯ ಇಲಾಖೆ ಕಾರು ಜಪ್ತಿ ಮಾಡಲು ಬಂದಾಗ ಕಾರು ತೆಗೆದುಕೊಂಡು ಸಿಬ್ಬಂದಿ ಪರಾರಿಯಾಗಿದ್ದರು.
ಈ ಬಗ್ಗೆ ವಕೀಲರು ಕೋರ್ಟ್ ಗೆ ಮಾಹಿತಿ ನೀಡುತ್ತಿದ್ದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಕಾರಿನ ಕೀಯನ್ನು ಕಕ್ಷಿದಾರರ ಪರ ವಕೀಲರ ಕೈಗೆ ಕೊಟ್ಟ ಪ್ರಸಂಗ ನಡೆಯಿತು. ಕೋರ್ಟ್ ಆದೇಶದ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಯ ಕಾರನ್ನು ಜಪ್ತಿ ಮಾಡಲಾಯಿತು.