Kannada NewsLatest

ಪತ್ರಕರ್ತರಿಗೆ “ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ” ಕಾರ್ಡ್ ವಿತರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಸರ್ಕಾರದಿಂದ ಕೊಡ ಮಾಡಲಾದ “ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ” ವಿಶೇಷ ಆರೋಗ್ಯ ಕಾರ್ಡುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ವಿತರಿಸಿದರು.

ಬೆಳಗಾವಿಯ ಪ್ರವಾಸಿಮಂದಿರದಲ್ಲಿ ಐದು ಜನರಿಗೆ ಸಾಂಕೇತಿಕವಾಗಿ ಕಾರ್ಡ್ ವಿತರಿಸಲಾಯಿತು. ಈ ವೇಳೆ ಪತ್ರಕರ್ತರ ತಂದೆ-ತಾಯಿ ಅವರನ್ನೂ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಮಾಧ್ಯಮ ಪ್ರತಿನಿಧಿಗಳು ಸಚಿವರಿಗೆ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವ ರಮೇಶ್ ಜಾರಕಿಹೊಳಿ ಅವರು, ಮೊದಲ ಹಂತದಲ್ಲಿ ಈಗಾಗಲೇ ಆರಂಭಿಸಲಾಗಿರುವ ಕಾರ್ಡ್ ವಿತರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕುಟುಂಬ ವ್ಯಾಪ್ತಿಗೆ ತಂದೆ-ತಾಯಿ ಅವರನ್ನು ಸೇರಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಮೊದಲ ಹಂತದಲ್ಲಿ ‌ಅರ್ಜಿ ಸಲ್ಲಿಸಿರುವ ವಾರ್ತಾ ಇಲಾಖೆಯ ಮಾನ್ಯತಾ ಕಾರ್ಡು ಹೊಂದಿದ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರ ಕಾರ್ಡುಗಳನ್ನು ವಿತರಿಸಲಾಗುತ್ತಿದೆ. ಮಾನ್ಯತಾ ಕಾರ್ಡು ಹೊಂದಿ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸದೇ ಇರುವ ಪತ್ರಕರ್ತರಿಗೆ ಮುಂಬರುವ ದಿನಗಳಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡುಗಳನ್ನು ವಿತರಿಸಲಾಗುವುದು ಎಂದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ವಿವರಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯೋಜಿತ ಆರೋಗ್ಯ ಯೋಜನೆಯಡಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಕಾರ್ಡುಗಳ ಮೂಲಕ ಒದಗಿಸಲಾಗುತ್ತಿದೆ ಎಂದು ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button