ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಕುರುಬ ಸಮುದಾಯಕ್ಕೆ ನೀಡಬೇಕೆಂಬ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ,ಬಿಜೆಪಿಯಲ್ಲಿ ಕುರುಬ ಸಮಾಜ, ಲಿಂಗಾಯತ ಸಮಾಜ, ಒಕ್ಕಲಿಗ ಸಮಾಜ, ಬ್ರಾಹ್ಮಣ ಸಮಾಜ ಅಂತಾ ಪ್ರಶ್ನೆ ಇಲ್ಲ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಬೆಳಗಾವಿ ಲೋಕಸಭಾ ಟಿಕೆಟ್ ಕುರುಬರಿಗೆ ಕೊಡ್ತಿವೋ, ಲಿಂಗಾಯತರಿಗೆ ಕೊಡ್ತಿವೋ, ಒಕ್ಕಲಿಗರಿಗೆ ಕೊಡ್ತಿವೋ, ಬ್ರಾಹ್ಮಣರಿಗೆ ಕೊಡ್ತಿವೋ ಗೊತ್ತಿಲ್ಲ. ಬೆಳಗಾವಿ ಹಿಂದೂತ್ವದ ಕೇಂದ್ರ, ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಟಿಕೆಟ್ ಕೊಡೋ ಪ್ರಶ್ನೆ ಬರಲ್ಲ. ರಾಯಣ್ಣ ಶಿಷ್ಯಂದರಿಗೆ ಕೊಡ್ತೀವೋ, ಚೆನ್ನಮ್ಮ ಶಿಷ್ಯಂದರಿಗೆ ಕೊಡ್ತೀವೋ, ಶಂಕರಾಚಾರ್ಯ ಶಿಷ್ಯಂದರಿಗೆ ಕೊಡ್ತಿವೋ ಗೊತ್ತಿಲ್ಲ. ಎಲ್ಲ ಒಟ್ಟಿಗೆ ಕುಳಿತು ರಾಷ್ಟ್ರದ ನಾಯಕರ ಜೊತೆ ಚರ್ಚೆ ಮಾಡ್ತೀವಿ. ಯಾರು ಜನರ ಮಧ್ಯೆ ಗೆಲ್ತಾರೆ ಅಂತವರನ್ನ ಹುಡುಕಿ ಟಿಕೆಟ್ ಕೊಡ್ತೀವಿ ಎಂದರು.
ಕಾಂಗ್ರೆಸ್ ಪಕ್ಷದವರು ಕುರುಬರಿಗೆ ಬಹಳ ಟಿಕೆಟ್ ಕೊಟ್ರಲ್ಲ ಎಷ್ಟು ಗೆದ್ರು? ನಾನು ಕುರುಬರಿಗೆ ಮೂರು ಟಿಕೆಟ್ ಕೊಟ್ಟಿದೀನಿ, ಈಶ್ವರಪ್ಪ ಎಷ್ಟು ಕೊಟ್ರು ಅಂತಾ ಕೇಳಿದರಲ್ಲ. ಡಿಪಾಜಿಟ್ ಕಳದುಕೊಳ್ಳೋಕೆ ಟಿಕೆಟ್ ಕೊಡಬೇಕೇನು? ಎಂದು ಪ್ರಶ್ನಿಸಿದರು.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ಸಿದ್ದರಾಮಯ್ಯ ವರ್ಚಸ್ಸು ಎಲ್ಲಿದೆ, ಆರ್ ಆರ್ ನಗರ ಶಿರಾ ಕ್ಷೇತ್ರದಲ್ಲಿ ಏನಾಯ್ತು? ಕಾಂಗ್ರೆಸ್ಸೇ ಇಲ್ಲ ಪಾಪ ಸಿದ್ದರಾಮಯ್ಯ ಎಲ್ಲಿ? ಬಾದಾಮಿಯಲ್ಲಿ ಹೆಚ್ಚು ಕಡಿಮೆ ಆಗಿದ್ರೆ ಸಿದ್ದರಾಮಯ್ಯ ರಾಜಕಾರಣದಲ್ಲಿಯೇ ಇರ್ತಿರಲಿಲ್ಲ. ರಾಜಕೀಯವಾಗಿ ನಾವು ಬದುಕಿದ್ದೀವಿ ಅಂತಾ ತೋರಿಸೋಕೆ ಏನೇನೋ ಹೇಳಿಕೆ ಕೊಡ್ತಿದಾರೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ