Kannada NewsLatestPolitics

ಕೆಎಲ್ಇ, ಕೇಂದ್ರ ಸರ್ಕಾರ – ಮಹತ್ವದ ಒಪ್ಪಂದ

ಗುಣಮಟ್ಟದ ಸೋಯಾ ಅವರೆ ಬೀಜೋತ್ಪಾದನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರವು ಗುಣಮಟ್ಟದ ಸೋಯಾಅವರೆ ಬೀಜೋತ್ಪಾದನೆ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.

ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೋಯಾಅವರೆ ಕ್ಷೇತ್ರ ಹೆಚ್ಚಾಗುತ್ತಲಿದ್ದು, ಬೆಳಗಾವಿ ಜಿಲ್ಲೆಯು ಸೋಯಾಅವರೆಯನ್ನು ಬೆಳೆಯುವ ರಾಜ್ಯದ ಎರಡನೆಯ ಪ್ರಮುಖ ಜಿಲ್ಲೆಯಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹೇಳಿದರು

ಬೆಳಗಾವಿ ಕೆಎಲ್‌ಇ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಹೊಸ ತಳಿಗಳ ಗುಣಮಟ್ಟದ ಸೋಯಾಅವರೆ ಬೀಜೋತ್ಪಾದನೆ ಕುರಿತು ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದರು. ಸೋಯಾಅವರೆ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಿ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಗುಣಮಟ್ಟದ ಬೀಜದ ಪೂರೈಕೆ ಅತೀ ಮುಖ್ಯವಾಗಿದೆ. ಆದರೆ, ರಾಜ್ಯವೂ ಸೇರಿದಂತೆ ಸೋಯಾಅವರೆ ಬೆಳೆಯುವ ಇತರೇ ರಾಜ್ಯಗಳಲ್ಲಿ ಅಧಿಕ ಇಳುವರಿ ನೀಡುವ ಹೊಸ ತಳಿಗಳ ಗುಣಮಟ್ಟದ ಬೀಜದ ಕೊರತೆಯಿರುವುದು. ಈ ದಿಶೆಯಲ್ಲಿ ರೈತರ ಸಮಸ್ಯೆಗಳನ್ನು ಮನದಲ್ಲಿಟ್ಟುಕೊಂಡು ಐಸಿಎಆರ್–ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಮೂಲಕ ಹೊಸ ತಳಿಗಳ ಗುಣಮಟ್ಟದ ಸೋಯಾಅವರೆ ಬೀಜೋತ್ಪಾದನೆ ಮಾಡಿ, ಕರ್ನಾಟಕ ರಾಜ್ಯದ ರೈತರಿಗೆ ಪೂರೈಕೆ ಮಾಡುವ ಸಲುವಾಗಿ ಭಾರತ ಸರಕಾರದೊಂದಿಗೆ ಪ್ರಮುಖವಾದ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಒಡಂಬಡಿಕೆಯಿಂದ ಕರ್ನಾಟಕ ರಾಜ್ಯದ ಅದರಲ್ಲೂ ಬೆಳಗಾವಿ ಜಿಲ್ಲೆಯ ಸೋಯಾಅವರೆ ಬೆಳೆಯುವ ರೈತ ಸಮುದಾಯಕ್ಕೆ ಸುಧಾರಿತ ಹೊಸ ತಳಿಗಳ ಪರಿಚಯವಾಗುವುದಲ್ಲದೇ ದೇಶದ ಇತರೆ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯದ ರೈತರಿಗೂಸಹ ಲಾಭವಾಗಲಿದೆ ಎಂದು ಕೂಡ ಡಾ.ಪ್ರಭಾಕರ ಕೋರೆಯವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಭಾರತ ಸರಕಾರದ ಪರವಾಗಿ ನವದೆಹಲಿಯ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ಉಪ ಆಯುಕ್ತರಾದಬಿ.ಕೆ ಶ್ರೀವಾಸ್ತವ ಹಾಗೂ ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಬಿ.ಆರ್.ಪಾಟೀಲ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಐಸಿಎಆರ್‌ನ ಭಾರತೀಯ ಸೋಯಾಅವರೆ ಸಂಶೋಧನಾಸಂಸ್ಥೆ ನಿರ್ದೇಶಕರಾದ ಡಾ.ನೀತಾಖಾಂಡೇಕರ ಹಾಗೂ ಪ್ರಧಾನ ವಿಜ್ಞಾನಿ ಡಾ.ಸಂಜಯ ಗುಪ್ತಾ ಹಾಗೂ ಐಸಿಎಆರ್-ಅಟಾರಿ, ವಲಯ-11, ಬೆಂಗಳೂರು ನಿರ್ದೇಶಕರಾದ ಡಾ.ವಿ.ವೆಂಕಟಸುಬ್ರಮಣಿಯನ್ ಉಪಸ್ಥಿತರಿದ್ದರು.

ಈ ಮಹತ್ವದ ಯೋಜನೆಯ ಅನುಷ್ಠಾನವನ್ನು ಸಸ್ಯ ತಳಿಗಳು ಹಾಗೂ ರೈತರ ಹಕ್ಕುಗಳ ಸಂರಕ್ಷಣೆ ಪ್ರಾಧಿಕಾರ, ನವದೆಹಲಿಯ ಹಿಂದಿನ ಕಾರ್ಯಾಧ್ಯಕ್ಷರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ, ಡಾ.ಆರ್.ಆರ್.ಹಂಚಿನಾಳ ಇವರ ಮಾರ್ಗದರ್ಶನದಲ್ಲಿ ನಡೆಯುವುದು ಹಾಗೂ ಕೃಷಿ ವಿಜ್ಞಾನಕೇಂದ್ರ ಮುಖ್ಯಸ್ಥರಾದ ಶ್ರೀದೇವಿ ಬಿ. ಅಂಗಡಿ ಹಾಗೂ ಬೇಸಾಯ ಶಾಸ್ತ್ರದ ವಿಜ್ಞಾನಿ ಜಿ.ಬಿ.ವಿಶ್ವನಾಥ ಇವರು ಕ್ಷೇತ್ರಮಟ್ಟದಲ್ಲಿ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿರುವರು.

ಈ ಯೋಜನೆ ಅವಧಿಯು ಐದು ವರ್ಷಗಳಾಗಿದ್ದು, ಯೋಜನೆ ಅನುಷ್ಠಾನಕ್ಕೆ ಬಂದ ನಂತರ, ರೈತ ಸಮುದಾಯಕ್ಕೆ ಸೋಯಾಅವರೆ ಉತ್ಪಾದನಾ ತಾಂತ್ರಿಕತೆ ಬಗ್ಗೆ ಮಾಹಿತಿ ಕೊಡುವುದಲ್ಲದೇ, ಗುಣಮಟ್ಟದ ಸುಧಾರಿತ ತಳಿಗಳ ಬೃಹತ್ ಬೀಜೋತ್ಪಾದನೆ ಕೈಗೊಂಡು ರೈತರಿಗೆ ಸಕಾಲಕ್ಕೆ ಒದಗಿಸಲಾಗುವುದು ಹಾಗೂ ಈ ಅವಧಿಯಲ್ಲಿ ತಮಿಳುನಾಡು, ಒರಿಸ್ಸಾ ಹಾಗೂ ಈಶಾನ್ಯ ರಾಜ್ಯಗಳಲ್ಲಿಯೂ ಸೋಯಾಅವರೆ ಕ್ಷೇತ್ರವು ವಿಸ್ತರಣೆಯಾಗುವುದು. ಈ ಕಾರ್ಯಕ್ರಮದಲ್ಲಿ ಐಸಿಎಆರ್‌ನ ಭಾರತೀಯ ಸೋಯಾಅವರೆ ಸಂಶೋಧನಾಸಂಸ್ಥೆ (ಇಂದೋರ್) ಯವರೂ ಸಹ ಸಹ ಪಾಲ್ಗೊಳ್ಳುವರು ಮತ್ತು ಹೊಸತಳಿಗಳು ಬಿಡುಗಡೆಯಾದ ನಂತರ ಒಂದೇ ವರ್ಷದಲ್ಲಿ ಮೂರು ಹಂಗಾಮುಗಳಲ್ಲಿ ಬೀಜೋತ್ಪಾದನೆ ಕೈಗೊಳ್ಳುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ.

ಆಭರಣ ಪ್ರಿಯರಿಗೆ ಮತ್ತೊಂದು ಶಾಕ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button