*ಬೆಳಗಾವಿಗೆ ಆಗಮಿಸಿದ ಪ್ರಧಾನಿ ಮೋದಿ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ಸಾಲು ಸಾಲು ಸಮಾವೇಶಗಳಲ್ಲಿ ಪಾಲ್ಗೊಂಡು, ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ.
ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಬೆಳಗಾವಿ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದು, ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ರುಮಾಲು ತೊಡಿಸಿ, ಬೆಲ್ಲದ ಮೂರ್ತಿ ನೀಡಿ ಸನ್ಮಾನಿಸಲಾಯಿತು. ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ದೇವಾಲಯಗಳ ಭೂಮಿಗೆ ಬಂದ ನನಗೆ ಅಪಾರ ಸಂತಸವಾಗಿದೆ. ಇಲ್ಲಿನ ಕಾರ್ಯಕರ್ತರನ್ನು ಕಂಡು ಮನಸ್ಸು ತುಂಬಿದೆ. ಈಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕಾಂಗ್ರೆಸ್ ಗೆ ಜನರ ಅಭಿವೃದ್ಧಿ ಮುಖ್ಯವಲ್ಲ, ಬಡ ಜನರಿಗಾಗಿ ಕಾಂಗ್ರೆಸ್ ಯಾವ ಯೋಜನೆಯನ್ನೂ ಜಾರಿ ಮಾಡಲಿಲ್ಲ. ಬಂಜಾರ ಸಮುದಾಯಕ್ಕೆ ಹಕ್ಕು ಪತ್ರ ನೀಡಿದ್ದು ಬಿಜೆಪಿ. ಪ್ರತಿಯೊಂದು ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡುತ್ತಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ