Kannada NewsLatest

ಹೊಸ ಗ್ರಾಮ ಪಂಚಾಯತಿ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಲಪ್ರಭಾ ನದಿ‌ ದಂಡೆಯ ವೀರಾಪುರ ಗ್ರಾಮವು ಸ್ಥಳಾಂತರಗೊಂಡ ಗ್ರಾಮವಾಗಿದೆ. ರಸ್ತೆ, ಚರಂಡಿ ಮತ್ತು ಗಟಾರು ಸಮಸ್ಯೆ ಪ್ರಮುಖವಾಗಿ ಕಂಡುಬಂದಿದೆ. ಈ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭರವಸೆ ನೀಡಿದರು.

ಗ್ರಾಮ ಸಂಚಾರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ವೀರಾಪುರ ಗ್ರಾಮ ಪಂಚಾಯತಿ ಆಗಿರುವುದರಿಂದ ಅಭಿವೃದ್ಧಿ ಕೆಲಸಗಳು ಚುರುಕುಗೊಳ್ಳಲಿವೆ ಎಂದರು.

ವೀರಾಪುರ ಗ್ರಾಮ ಪಂಚಾಯತಿ ಉದ್ಘಾಟನೆ ಇಂದಿನ ಪ್ರಮುಖ ಕಾರ್ಯವಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಮದ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿಯಾಗಲಿದೆ ಎಂದರು.

ಇತ್ತೀಚಿನ ಮಳೆಯಿಂದ ಕುಸಿದಿರುವ ಮನೆಯ ಗೋಡೆಗಳ ಕುಸಿತ ಸಮೀಕ್ಷೆ ‌ಮಾಡಲಾಗಿದೆ. ಬಿ ಅಥವಾ ಸಿ ಕೆಟಗರಿಯಲ್ಲಿ ಪರಿಗಣಿಸಿ ಪರಿಹಾರವನ್ನು ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಒಂದು ವೇಳೆ ಸಮೀಕ್ಷೆಯಿಂದ ಕೈಬಿಟ್ಟು ಹೋಗಿದ್ದರೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುವುದು.

ಗ್ರಾಮಕ್ಕೆ ಸಾರಿಗೆ ಸಮಸ್ಯೆಯನ್ನು ಕೂಡ ಗಮನಿಸಲಾಗಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಲಾಗುವುದು.ಉಪ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.

ಮುಳುಗಡೆ ಭೀತಿ- ಕೆರೆ‌ಯ ಹೆಚ್ಚುವರಿ ನೀರು ನದಿಗೆ‌ ಹರಿಸಲು ಕ್ರಮ:

ಕೆರೆ ತುಂಬಿದಾಗ ಹೆಚ್ಚುವರಿ ನೀರನ್ನು ನೇರವಾಗಿ‌ ನದಿಗೆ ಸೇರಿಸಲು ಸೂಕ್ತ ಯೋಜನೆ ರೂಪಿಸಿ ಮುಳುಗಡೆ ಅಥವಾ ಮಳೆಗಾಲದಲ್ಲಿ ‌ಗ್ರಾಮ‌ ಜಲಾವೃತ ಭೀತಿ ದೂರಗೊಳಿಸಲಾಗುವುದು.
ಅತಿಕ್ರಮಣ ತೆರವುಗೊಳಿಸಿ ಕೆರೆಯ ನೀರು ಸರಾಗವಾಗಿ ಮಲಪ್ರಭಾ ನದಿಗೆ ಹರಿಯುವಂತೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ‌ಭರವಸೆ ನೀಡಿದರು.

50 ಕುಟುಂಬಗಳಿಗೆ ಮಾಸಾಶನ ಮಂಜೂರಾತಿ ಪತ್ರ ವಿತರಣೆ:

ವೀರಾಪುರ ಗ್ರಾಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ 50 ಜನರಿಗೆ ಇಂದು‌ ವಿವಿಧ ಮಾಸಾಶನ ಮಂಜೂರಾತಿ ಪತ್ರಗಳನ್ನು ಸಂಜೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ ಎಂದರು.

ಅದೇ ರೀತಿ ಐವತ್ತು ಕುಟುಂಬಗಳಿಗೆ ಜಮೀನಿನ‌ ಖಾತಾ ಹಾಗೂ ನಕಾಶೆ ಸಮೇತ ಆರ್.ಟಿ.ಸಿ. ನೀಡಲಾಗುವುದು.
ಹೊಸ ಗ್ರಾಮ ಪಂಚಾಯತಿ ಉದ್ಘಾಟನೆ ಕೂಡ ಇಂದು‌ ನೆರವೇರಲಿದೆ.

ಮನೆಹಾನಿ ಪರಿಹಾರ ಈಗಾಗಲೇ ಮೊದಲ‌ ಕಂತು ನೀಡಲಾಗಿದೆ. ಇನ್ನುಳಿದವರ ಖಾತೆಗೆ ನೇರವಾಗಿ ಕಂತು ಪ್ರಕಾರ ಪರಿಹಾರಧನ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ -2021 : ಇಲ್ಲಿದೆ ವೀರ ಜ್ಯೋತಿ ಯಾತ್ರೆ ವೇಳಾಪಟ್ಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button