Kannada NewsLatest

ಜಿಲ್ಲಾಧಿಕಾರಿ ನಡೆ ವೀರಾಪುರದ ಕಡೆ; ಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ‌ಹಿರೇಮಠ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ ಜನರ ಅಹವಾಲುಗಳನ್ನು ಆಲಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಸರಕಾರದ ಆಶಯದಂತೆ ಮೂರನೇ ಶನಿವಾರ (ಅ.16) ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಸ್ವತಃ ಪುಸ್ತಕ-ಪೆನ್ನು ಹಿಡಿದು ಮನೆ ಮನೆಗೆ ತೆರಳಿ ಸಮಸ್ಯೆಗಳ ಪಟ್ಟಿಯನ್ನು ಮಾಡಿಕೊಂಡರು.

ಊರಿಗೆ ಬಂದ ಜಿಲ್ಲಾಧಿಕಾರಿಗಳಿಗೆ ಚಿಣ್ಣರ ಸ್ವಾಗತ:

ಜಗದ್ಗುರು ಕೇದಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಗ್ರಾಮ ಭೇಟಿ ಆರಂಭಿಸಿದ ಜಿಲ್ಲಾಧಿಕಾರಿ ತಮ್ಮೂರಿಗೆ ಬಂದ ಸಂಭ್ರಮದಲ್ಲಿದ್ದ ಊರಿನ ಮಕ್ಕಳು ಅವರೊಂದಿಗೆ ಹೆಜ್ಜೆ ಹಾಕಿ ಸಂಭ್ರಮದಿಂದ ಬರಮಾಡಿಕೊಂಡರು.

ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ವಾದ್ಯಮೇಳದೊಂದಿಗೆ ಜಿಲ್ಲಾಧಿಕಾರಿಗಳಿಗೆ ಸ್ವಾಗತಿಸಿದರು.

ಜಿಲ್ಲಾಧಿಕಾರಿ ಹಿರೇಮಠ ಅವರು ನಂತರ ಗ್ರಾಮದ ಸತ್ಯೆಮ್ಮಾದೇವಿ ದೇವಸ್ಥಾನಕ್ಕೆ ಹಿರಿಯರ ಜತೆ ದರ್ಶನ ಪಡೆದುಕೊಂಡರು. ಸರಕಾರಿ ಪ್ರೌಢಶಾಲೆಯ ಗ್ರಂಥಾಲಯದಲ್ಲಿ ಆರಂಭಿಸಲಾಗಿರುವ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ನಂತರ ಅಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು.

ಅಂಗನವಾಡಿ ಕೇಂದ್ರಕ್ಕೆ ತೆರಳಿದ ಜಿಲ್ಲಾಧಿಕಾರಿಗಳನ್ನು ಅಲ್ಲಿನ ಮಕ್ಕಳು ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಮಕ್ಕಳಿಗೆ ನೀಡಲಾಗುತ್ತಿವ ಪೌಷ್ಟಿಕಾಹಾರ, ಹಾಲು ಹಾಗೂ ಮೊಟ್ಟೆಯ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸ್ವತಃ ಹಾಲು ವಿತರಿಸಿದರು.

ಬಳಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿದರು. ಸರಿಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿಯನ್ನು ನೆಟ್ಟರು. ಇದೇ ಸಂದರ್ಭದಲ್ಲಿ ‌ವಿಜ್ಞಾನ ರಂಗೋಲಿ, ಪಾಠೋಪಕರಣ ಕೇಂದ್ರವನ್ನು ವೀಕ್ಷಿಸಿದರು.

ಗ್ರಾಮಸಂಚಾರ; ಪೆನ್ನು ಪುಸ್ತಕ ಹಿಡಿದು ಸಮಸ್ಯೆಗಳ ಪಟ್ಟಿ ಮಾಡಿದ ಡಿಸಿ:

ಹರಿಜನ ಕೇರಿಯಿಂದ ಗ್ರಾಮಸಂಚಾರವನ್ನು ಆರಂಭಿಸಿದ ಜಿಲ್ಲಾಧಿಕಾರಿಗಳು ಮನೆ ಮನೆಗೆ‌ ತೆರಳಿ ಜನರ‌ ಸಮಸ್ಯೆಗಳನ್ನು ಆಲಿಸಿದರು. ಸ್ವತಃ ಜಿಲ್ಲಾಧಿಕಾರಿಯೇ ಮನೆಬಾಗಿಲಿಗೆ ಬಂದಾಗ ಸಂತಸಗೊಂಡ ಜನರು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಕೈಲೊಂದು ಪುಸ್ತಕ ಮತ್ತು ಪೆನ್ನು ಹಿಡಿದುಕೊಂಡು ಸಂಚರಿಸಿದ ಡಿಸಿ ಹಿರೇಮಠ ಅವರು, ಆಯಾ ಕುಟುಂಬದ ಮುಖ್ಯಸ್ಥರ ಹೆಸರು ಹಾಗೂ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡರು.

ಚನ್ನಪ್ಪ ಗಂಗಪ್ಪ ತಳವಾರ, ರಸ್ತೆ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡರು. ಪಕ್ಕದ ಮನೆಯ ಕಮಲವ್ವ ತಳವಾರ ಅವರು, ಮನೆಯ ಗೋಡೆ ಕುಸಿತಗೊಂಡಿದೆ. ರಾತ್ರಿ ನೆಮ್ಮದಿಯ ನಿದ್ರೆ ಸಾಧ್ಯವಾಗುತ್ತಿಲ್ಲ ಎಂದರು. ಇದಕ್ಕೆ‌ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಸಮೀಕ್ಷೆ ಮಾಡಿ ಕ್ರಮ ಕೈಗೊಳ್ಳಲಾಗುವುದು.

ವೀರಾಪುರದ ಹರಿಜನ ಕೇರಿಯ ಬಸ್ಸವ್ವ ಶಿವಪ್ಪ ತಳವಾರ ಅವರ ಮನೆಬಾಗಿಲಿಗೆ ತೆರಳಿ ವೃದ್ಧಾಪ್ಯ ವೇತನ ಮಂಜೂರಾತಿ ಜಿಲ್ಲಾಧಿಕಾರಿ ಹಿರೇಮಠ ಪತ್ರವನ್ನು ವಿತರಿಸಿದರು.

ನಿಂಗಪ್ಪ ತಳವಾರ ಅವರ ಮನೆಗೆ ತೆರಳಿದ ಅವರು, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಬೇಕು. ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಶತಪ್ರಯತ್ನ ನಡೆಸಿದ ಶಿಕ್ಷಕರ ಜತೆ ಚರ್ಚಿಸಿದರು.

ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ತಿಳಿಸಿದರು. ಮನೆಯನ್ನು ಒದಗಿಸಲು ಕುಟುಂಬಸ್ಥರು ಮನವಿ ಮಾಡಿಕೊಂಡರು.

ಗದಿಗೆಪ್ಪ ಕಮಲವ್ವ ತಳವಾರ ಮನೆಯೊಳಗೆ ತೆರಳಿ ಪರಿಶೀಲಿಸಿದ ಅವರು, ನಲವತ್ತು ವರ್ಷಗಳ ಹಳೆಯ‌ ಮನೆಯ‌ ಗೋಡೆ ಕುಸಿದಿರುವುದನ್ನು ಪರಿಶೀಲಿಸಿದರು. ಈ ಬಗ್ಗೆ ಕೂಡಲೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ತಹಶೀಲ್ದಾರಗೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ತಹಶಿಲ್ದಾರ ಸೋಮಲಿಂಗಪ್ಪ ಹಾಲಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಪಶುಪಾಲನೆ ಇಲಾಖೆಯ ಉಪ ನಿರ್ದೇಶಕರಾದ ಡಾ.ಅಶೋಕ ಕೊಳ್ಳಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
100 ಕ್ಷೇತ್ರಗಳಿಗೆ ಬಿಜೆಪಿ ಹೊಸ ಮುಖ: ಯಾರಿಗೆ ತಪ್ಪಲಿದೆ ಈ ಬಾರಿ ಟಿಕೆಟ್?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button